Chikkodi

ಅಧಿಕಾರ ಇರಲಿ-ಇಲ್ಲದಿರಲಿ ಜನರ ಪರ ಧ್ವನಿ — ಎಚ್.ಸಿ. ಮಹದೇವಪ್ಪ,​ಆಶಾ ಕಾರ್ಯಕರ್ತರ ಧರಣಿ ಕೈಬಿಡುವಂತೆ ಮನವಿ

Share

ಸಾರ್ವಜನಿಕ ಬದುಕಿನಲ್ಲಿ ಅಧಿಕಾರ ಇರಲಿ ಅಥವಾ ಇಲ್ಲದಿರಲಿ, ಜನರು, ನ್ಯಾಯ ಮತ್ತು ಬಡವರ ಪರವಾಗಿ ನಿಲ್ಲುವುದೇ ನಿಜವಾದ ಉದ್ದೇಶವಾಗಿದೆ. ಅಧಿಕಾರ ಇದ್ದಾಗ ಅವರ ಪರ ಕೆಲಸ ಮಾಡಬೇಕು, ಇಲ್ಲದಿದ್ದಾಗ ಅವರ ಪರ ಧ್ವನಿ ಎತ್ತಬೇಕು ಎಂದು ಎಚ್.ಸಿ. ಮಹದೇವಪ್ಪ ಹೇಳಿದರು.

​ಚಿಕ್ಕೋಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಅಥವಾ ನಿರೀಕ್ಷೆಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, “ನನಗೆ ಯಾವುದೇ ಮುನಿಸು ಇಲ್ಲ. ನಾನು ನಗುತ್ತಿಲ್ಲವೇ, ಖುಷಿಯಾಗಿಲ್ಲವೇ? ಮುನಿಸಿಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
​ಆಶಾ ಕಾರ್ಯಕರ್ತರ ಬೇಡಿಕೆ ಮತ್ತು ಧರಣಿ

ಆಶಾ ಕಾರ್ಯಕರ್ತರ ಹೋರಾಟದ ಕುರಿತು ಮಾತನಾಡಿದ ಅವರು, ಕೋವಿಡ್ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಆಶಾ ಕಾರ್ಯಕರ್ತರು ಮಹತ್ವದ ಸೇವೆ ಸಲ್ಲಿಸಿದ್ದಾರೆ. ಸರ್ಕಾರ ಮತ್ತು ಜನರ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಮೊದಲು ಅವರನ್ನು ‘ಲಿಂಕ್ ವರ್ಕರ್ಸ್’ ಎಂದು ಕರೆಯುತ್ತಿತ್ತು, ನಂತರ ಕಾರ್ಯಕರ್ತರು ಎಂದು ಬದಲಾಯಿಸಿತು ಎಂದರು.

​ಕಡಿಮೆ ಗೌರವಧನದಲ್ಲಿ ಜೀವನ ನಡೆಸಲು ತೊಂದರೆಯಾಗುತ್ತಿದೆ ಎಂದು ಅವರು ಬೇಡಿಕೆ ಇಟ್ಟಿದ್ದಾರೆ. ಇದು ಆರೋಗ್ಯ ಇಲಾಖೆಗೆ ಸಂಬಂಧಿಸಿದ ವಿಚಾರವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕುಳಿತು ಚರ್ಚಿಸಬೇಕು. ಕನಿಷ್ಠ ವೇತನ ಕಾಯ್ದೆ ವ್ಯಾಪ್ತಿಯಲ್ಲಿಯೂ ನೆರವು ನೀಡುವ ಬಗ್ಗೆ ಚಿಂತನೆ ನಡೆಯಬೇಕು. ಚುನಾವಣಾ ಪ್ರಣಾಳಿಕೆಯಲ್ಲೂ ಗೌರವಧನ ಹೆಚ್ಚಿಸುವ ಭರವಸೆ ನೀಡಲಾಗಿದೆ ಎಂದು ತಿಳಿಸಿದರು.

​ಸದ್ಯ ಸುಮಾರು 12 ದಿನಗಳಿಂದ ಧರಣಿ ನಡೆಸುತ್ತಿರುವ ಆಶಾ ಕಾರ್ಯಕರ್ತರು ಮುಖ್ಯಮಂತ್ರಿಗಳು ಮತ್ತು ಸರ್ಕಾರದ ಮೇಲೆ ನಂಬಿಕೆ ಇಟ್ಟು ಧರಣಿಯನ್ನು ವಾಪಸ್ ಪಡೆಯಬೇಕು. ಬಳಿಕ ಸರ್ಕಾರ ಈ ಬಗ್ಗೆ ಗಂಭೀರವಾಗಿ ಆಲೋಚಿಸಿ, ಕೇಂದ್ರ ಸಚಿವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ಮನವಿ ಮಾಡಿದರು.

​ಕ್ಷೇತ್ರ ಪುನರ್ವಿಂಗಡಣೆ ಮತ್ತು ಜನಸಂಖ್ಯೆ ನಿಯಂತ್ರಣ
​ಮುಂದಿನ ದಿನಗಳಲ್ಲಿ ನಡೆಯಲಿರುವ ಕ್ಷೇತ್ರ ಪುನರ್ವಿಂಗಡಣೆ ಕುರಿತು ಪ್ರತಿಕ್ರಿಯಿಸಿದ ಅವರು ದಕ್ಷಿಣ ಭಾರತದ ರಾಜ್ಯಗಳು ಕುಟುಂಬ ಯೋಜನೆ (ಫ್ಯಾಮಿಲಿ ಪ್ಲಾನಿಂಗ್) ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸಿ ಜನಸಂಖ್ಯೆ ಸ್ಫೋಟವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಆದರೆ ಉತ್ತರ ಭಾರತದಲ್ಲಿ ಜನಸಂಖ್ಯೆ ನಿಯಂತ್ರಣ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ ಎಂದರು.

Tags:

error: Content is protected !!