ಹುಬ್ಬಳ್ಳಿಯ ಗಬ್ಬೂರಿನಲ್ಲಿರುವ ಜೈನ ಮಂದಿರದ ಬಾಗಿಲು ಮುರಿದು, ದೇವಸ್ಥಾನದಲ್ಲಿದ್ದ ಹುಂಡಿಯನ್ನೇ ಒಡೆದು ಲಕ್ಷಾಂತರ ರೂಪಾಯಿ ಹಣ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಅಂತರರಾಜ್ಯ ಕಳ್ಳರನ್ನು ಬೆಂಡಿಗೇರಿ ಪೊಲೀಸರು ಕೊನೆಗೂ ಹೆಡೆಮುರಿಕಟ್ಟಿದ್ದಾರೆ.
ರಾಜಸ್ಥಾನದ ಪಾಲಿ ಜಿಲ್ಲೆಯ ಬೀಮನ ಗ್ರಾಮದ ಪಾಪಿನ ಹಾಗೂ ರವಿ ಕುಮಾರ ಎಂಬುವರೇ ಕಳ್ಳತನ ಪ್ರಕರಣದ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳರ ಪತ್ತೆಗಾಗಿ ಬೆಂಡಿಗೇರಿ ಪೊಲೀಸರು ನಡೆಸಿದ ತನಿಖೆಯಲ್ಲಿ ಟೆಕ್ನಿಕಲ್ ಎವಿಡೆನ್ಸ್ ಪ್ರಮುಖ ಸುಳಿವಾಗಿ ಪರಿಣಮಿಸಿದೆ. ಸಾಕ್ಷ್ಯಾಧಾರಗಳನ್ನು ಬೆನ್ನತ್ತಿದ ಪೊಲೀಸರು ಆರೋಪಿಗಳ ಜಾಡನ್ನು ರಾಜಸ್ಥಾನದವರೆಗೂ ಪತ್ತೆಹಚ್ಚಿ, ಅಲ್ಲಿಂದ ಇಬ್ಬರನ್ನೂ ವಶಕ್ಕೆ ಪಡೆದು ಹುಬ್ಬಳ್ಳಿಗೆ ಕರೆತಂದಿದ್ದಾರೆ.
ಈ ಕಾರ್ಯಾಚರಣೆ ACP ಚಿಕ್ಕಮಠ ಅವರ ಮಾರ್ಗದರ್ಶನದಲ್ಲಿ, ಬೆಂಡಿಗೇರಿ ಠಾಣೆಯ ಇನ್ಸ್ಪೆಕ್ಟರ್ S.R. ನಾಯಕ ನೇತೃತ್ವದಲ್ಲಿ ನಡೆದಿದ್ದು, PSI ರವಿ ಹಾಗೂ ಸಿಬ್ಬಂದಿಗಳಾದ ಹನುಮಂತ, ಬಸು, ಚಂದ್ರು ಮತ್ತು ಅಮರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಅಂತರರಾಜ್ಯ ಕಳ್ಳರನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಬೆಂಡಿಗೇರಿ ಪೊಲೀಸರ ಕಾರ್ಯಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
