Khanapur

ಖಾನಾಪುರದಲ್ಲಿ ಮಲಪ್ರಭಾ ನದಿ ಸೇತುವೆಯ ಮೇಲೆ ಕಾರಿನ ಭೀಕರ ಅಪಘಾತ; ಏರ್‌ಬ್ಯಾಗ್ ತೆರೆದುಕೊಂಡಿದ್ದರಿಂದ ನಾಲ್ವರು ಪ್ರಾಣಾಪಾಯದಿಂದ ಪಾರು

Share

ಖಾನಾಪುರದ ಲೊಂಡಾ–ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮಲಪ್ರಭಾ ನದಿ ಸೇತುವೆಯ ಮೇಲೆ ಗ್ರ್ಯಾಂಡ್ ವಿಟಾರಾ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದರಿಂದ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗಳಿಂದ ಪಾರಾಗಿದ್ದಾರೆ.

ಆದರೆ, ನಾಲ್ವರಿಗೂ ಸಣ್ಣಪುಟ್ಟ ಗಾಯಗಳು ಹಾಗೂ ದೇಹದ ವಿವಿಧ ಭಾಗಗಳಿಗೆ ಪೆಟ್ಟು ಬಿದ್ದಿರುವುದಾಗಿ ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ.

ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿದ್ದೇನೆಂದರೆ, ಬೆಂಗಳೂರಿನ ನಾಲ್ವರು ಗೋವಾ ಪ್ರವಾಸಕ್ಕೆ ತೆರಳಿದ್ದರು. ಗೋವಾ ಪ್ರವಾಸ ಮುಗಿಸಿ ಇಂದು ಬೆಳಿಗ್ಗೆ ಬೆಳಗಾವಿಯತ್ತ ಪ್ರಯಾಣಿಸುತ್ತಿದ್ದಾಗ, ಸುಮಾರು 7.50ರ ವೇಳೆಗೆ ಖಾನಾಪುರ ನಗರ ಸಮೀಪ ಹೊಸದಾಗಿ ನಿರ್ಮಿಸಲಾದ ಹೆದ್ದಾರಿಯ ಮಲಪ್ರಭಾ ನದಿ ಸೇತುವೆಯ ಮೇಲೆ ಈ ಅಪಘಾತ ಸಂಭವಿಸಿದೆ.

ಪ್ರಾಥಮಿಕವಾಗಿ ಕಾರಿನ ಟೈರ್ ಸ್ಫೋಟಗೊಂಡಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಕಾರು ಸೇತುವೆಯ ಮೇಲಿನ ಡಿವೈಡರ್‌ಗೆ ಡಿಕ್ಕಿ ಹೊಡೆದಿರಬಹುದು ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಅಂದಾಜಿಸಿದ್ದಾರೆ. ಆದರೆ, ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದರಿಂದ ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಕುರಿತು ಖಾನಾಪುರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರದಲ್ಲಿ ಗೊಂದಲ ಉಂಟಾಯಿತು.

*ವರದಿಗಾರ:*
ಅಲ್ತಾಫ್ ಎಂ. ಬಸರೀಕಟ್ಟಿ, ಇನ್ ನ್ಯೂಸ್ ಖಾನಾಪುರ

Tags:

error: Content is protected !!