Kagawad

ಕಾಗವಾಡ ನ್ಯಾಯವಾದಿಗಳ ಸಂಘದಿಂದ ಸಂವಿಧಾನ ದಿನಾಚರಣೆ: ಯುವ ವಕೀಲರಿಗೆ ಹಿರಿಯ ಪ್ರಾಧ್ಯಾಪಕರಿಂದ ಮಾರ್ಗದರ್ಶನ

Share

ಕಾಗವಾಡ ನ್ಯಾಯವಾದಿಗಳ ಸಂಘದ ವತಿಯಿಂದ ಗುರುವಾರ ಸಂಜೆ ನ್ಯಾಯಾಲಯದ ಆವರಣದಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿಜಯಪುರದ ಕಾನೂನು ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಎಫ್.ಎಸ್. ಪಾಟೀಲ ಅವರು ಆಗಮಿಸಿ ಮಾತನಾಡಿ, ಇಂದಿನ ಪಂಚಾಯತ್ ರಾಜ್ ವ್ಯವಸ್ಥೆ, ಕಿರಿಯ ವಕೀಲರು ವೃತ್ತಿಜೀವನದಲ್ಲಿ ಎದುರಿಸುವ ಸವಾಲುಗಳು ಹಾಗೂ ಕಾನೂನು ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಅಗತ್ಯವಿರುವ ಮಾರ್ಗದರ್ಶನದ ಕುರಿತು ವಿವರಿಸಿದರು. ಅಲ್ಲದೆ, ದೇಶದ ಪ್ರಸ್ತುತ ರಾಜಕೀಯ ವ್ಯವಸ್ಥೆ, ಪ್ರಜಾಪ್ರಭುತ್ವದ ಆಶಯಗಳು ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಸಂವಿಧಾನದ ಮಹತ್ವದ ಕುರಿತು ಉಪನ್ಯಾಸ ನೀಡಿದರು.

ಕಾಗವಾಡ ನ್ಯಾಯಾಲಯದ ನ್ಯಾಯಾಧೀಶರಾದ ಕುಮಾರಿ ರೂಪಾ ಚೆನ್ನಿವಾರ ಅವರು ಮಾತನಾಡಿ, ನ್ಯಾಯಾಲಯದ ಪ್ರಸ್ತುತ ಕಾರ್ಯವಿಧಾನಗಳು, ಹೊಸದಾಗಿ ಜಾರಿಗೆ ಬರುತ್ತಿರುವ ಕಾನೂನುಗಳು ಹಾಗೂ ಹಿರಿಯ ನ್ಯಾಯಮೂರ್ತಿಗಳ ಅನುಭವ ಮತ್ತು ಮಾರ್ಗದರ್ಶನದ ಮಹತ್ವವನ್ನು ವಿವರಿಸಿದರು. ಕಿರಿಯ ವಕೀಲರು ನಿರಂತರವಾಗಿ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ವೃತ್ತಿ ಸೇವೆಯನ್ನು ಪ್ರಾಮಾಣಿಕವಾಗಿ ಮುಂದುವರಿಸಿದರೆ ಕಾನೂನು ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹಾಗೂ ಪ್ರಗತಿ ಸಾಧಿಸಲು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಿ.ಆರ್. ರಾವ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ತಾವು ಕಾನೂನು ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಉತ್ತಮ ಜ್ಞಾನ ಹಾಗೂ ಮಾರ್ಗದರ್ಶನ ನೀಡಿದ ಹಿರಿಯ ಗುರುಗಳಾದ ಪ್ರಾಧ್ಯಾಪಕ ಎಫ್.ಎಸ್. ಪಾಟೀಲ ಅವರ ಸೇವೆಯನ್ನು ಸ್ಮರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಅವರಿಂದ ಪಡೆದ ವಿಶೇಷ ಜ್ಞಾನ ಮತ್ತು ಮಾರ್ಗದರ್ಶನವು ತಮ್ಮಲ್ಲಿ ಸಾಕಷ್ಟು ಬದಲಾವಣೆ ತರಲು ಸಹಕಾರಿಯಾಗಿದೆ ಎಂದು ತಿಳಿಸಿ, ಅವರ ಶೈಕ್ಷಣಿಕ ಸೇವೆಯನ್ನು ಕೊಂಡಾಡಿದರು.

ಸಂವಿಧಾನ ದಿನಾಚರಣೆಯ ಅಂಗವಾಗಿ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗಣ್ಯರ ಸಮ್ಮುಖದಲ್ಲಿ ಬಹುಮಾನ ವಿತರಿಸಲಾಯಿತು.
ಸಮಾರಂಭದಲ್ಲಿ ಗ್ರೇಡ್-2 ತಹಶೀಲ್ದಾರ್ ಶ್ರೀಮತಿ ರಶ್ಮಿ ಜಕಾತೆ, ಸರ್ಕಾರಿ ನ್ಯಾಯವಾದಿ ಬಿ.ಡಿ. ಕಾಂಬಳೆ, ಸಿಡಿಪಿಒ ಸಂಜುಕುಮಾರ ಸದಲಗೆ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎಸ್.ವಿ. ನಾಂದ್ರೆ, ಕಾರ್ಯದರ್ಶಿ ಎಂ.ಜಿ. ವಡ್ಡರ್, ಖಜಾಂಚಿ ಎಸ್.ಜೆ. ಜೌಗುಲೆ, ಜಂಟಿ ಖಜಾಂಚಿ ಶಾನೂರ್ ಹುಸೇನ್, ಡಿ.ಎಂ. ಕೊರಬು, ಎಸ್.ಎಂ. ಕಾಂಬಳೆ, ಪಿ.ಎ. ಚೌಹಾಣ್, ಎ.ಬಿ. ಪಾಟೀಲ, ಪಿ.ಎಲ್. ನದಾಫ್, ಎಸ್.ಎಸ್. ಬಿರನಗಿ, ಹಿರಿಯ ನ್ಯಾಯವಾದಿಗಳಾದ ಅಭಯಕುಮಾರ ಅಕಿವಾಟೆ, ಎಸ್.ಬಿ. ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ನ್ಯಾಯವಾದಿ ಬಾಹುಬಲಿ ಮಗದುಮ್ ಅವರು ಸಂವಿಧಾನದ ಪೀಠಿಕೆಯನ್ನು ವಾಚಿಸಿದರು. ನ್ಯಾಯವಾದಿ ಎ.ಎಸ್. ಮುತಾರಿ ಅತಿಥಿಗಳ ಪರಿಚಯ ಮಾಡಿಕೊಟ್ಟರು. ನ್ಯಾಯವಾದಿಗಳಾದ ಶ್ರೀಮತಿ ಅರ್ಚನಾ ಪಾಟೀಲ ಹಾಗೂ ಪ್ರಕಾಶ್ ಕನಾಳ ಕಾರ್ಯಕ್ರಮ ನಿರೂಪಿಸಿದರು. ನ್ಯಾಯವಾದಿ ಶಿವಾಜಿ ಕಾಂಬಳೆ ವಂದಿಸಿದರು.

Tags:

error: Content is protected !!