ಮದುವೆಯಾಗುವುದಾಗಿ ನಂಬಿಸಿ 3-4 ವರ್ಷಗಳಿಂದ ಪ್ರೀತಿಸಿ, ಕೊನೆಗೆ ಮದುವೆಗೆ ನಿರಾಕರಿಸಿ ಯುವತಿಯನ್ನು ಭೀಕರವಾಗಿ ಕೊಲೆ ಮಾಡಿದ್ದ ಆರೋಪಿಯನ್ನು ಗೋಕಾಕ ನಗರ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.

ರಾಯಭಾಗ ತಾಲೂಕಿನ ಹಾರೂಗೇರಿಯ ರಕ್ಷಿತಾ ರಾಜು ಸರಿಕರ್ (25) ಕೊಲೆಯಾದ ದುರ್ದೈವಿ. ಅಥಣಿ ತಾಲೂಕಿನ ಅಡಹಟ್ಟಿ ಗ್ರಾಮದ ಹಾಗೂ ಬಿಹಾರ ರಾಜ್ಯದ 21ನೇ ಬೆಟಾಲಿಯನ್‌ನಲ್ಲಿ SSB ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ ಬಸಪ್ಪ ಸಿದ್ದಪ್ಪ ಸಾತಣ್ಣವರ (29) ಬಂಧಿತ ಆರೋಪಿಯಾಗಿದ್ದಾನೆ. ಕಳೆದ 28/10/2026 ರಂದು ಆರೋಪಿಯು ರಕ್ಷಿತಾಳನ್ನು ಹಾರೂಗೇರಿಯಿಂದ ಬೈಕ್ ಮೇಲೆ ಗೋಕಾಕ ಫಾಲ್ಸ್‌ಗೆ ಕರೆದುಕೊಂಡು ಬಂದಿದ್ದನು. ಅಲ್ಲಿ ರಸ್ತೆಯ ಬಾಜುವಿನ ಕಟ್ಟೆಯ ಮೇಲೆ ಕುಳಿತು ಮಾತನಾಡುವಾಗ, ಮದುವೆ ವಿಷಯವಾಗಿ ಮಾತಿಗೆ ಮಾತು ಬೆಳೆದು ಕೋಪಗೊಂಡ ಬಸಪ್ಪ, ರಕ್ಷಿತಾಳ ಕಿವಿಯ ಹತ್ತಿರ ಕಪಾಳಕ್ಕೆ ಹೊಡೆದು, ಕುತ್ತಿಗೆ ಹಿಸುಕಿ ವೇಲ್‌ನಿಂದ ಬಿಗಿದು ಭೀಕರವಾಗಿ ಕೊಲೆ ಮಾಡಿದ್ದನು. ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಗುಡ್ಡದ ಇಳಿಜಾರಿನ ಕಂಟಿಗಳ ಮಧ್ಯೆ ಎಸೆದು ಪರಾರಿಯಾಗಿದ್ದನು.

ಈ ಕುರಿತು ಮೃತರ ಸಹೋದರ ದರ್ಶನ ರಾಜು ಸರಿಕರ್ ನೀಡಿದ ದೂರಿನನ್ವಯ ಗೋಕಾಕ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 268/2026 ರಡಿ ಪ್ರಕರಣ ದಾಖಲಾಗಿತ್ತು. ಬೆಳಗಾವಿ ಎಸ್‌ಪಿ ಕೆ. ರಾಮರಾಜನ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಎಸ್‌ಪಿ ರಾಮಗೊಂಡ ಬಸರಗಿ, ಡಿಎಸ್‌ಪಿ ರವಿ ಡಿ. ನಾಯ್ಕ ಹಾಗೂ ಸಿಪಿಐ ವಿಜಯಕುಮಾರ ಸಿನ್ನೂರ ಅವರ ಉಸ್ತುವಾರಿಯಲ್ಲಿ ಪಿಎಸ್‌ಐ ಕಿರಣ ಮೋಹಿತೆ ನೇತೃತ್ವದ ತಂಡ ತನಿಖೆ ನಡೆಸಿ 02-11-2026 ರಂದು ಆರೋಪಿಯನ್ನು ಬಂಧಿಸಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ತನಿಖಾ ತಂಡದ ಕಾರ್ಯವನ್ನು ಎಸ್‌ಪಿ ಕೆ. ರಾಮರಾಜನ್ ಅವರು ಶ್ಲಾಘಿಸಿದ್ದಾರೆ.

