ಮದ್ಯದಂಗಡಿಯ ಮುಂಭಾಗದಲ್ಲಿ ೨ ಲಕ್ಷ ರೂಪಾಯಿ ನಗದು ಹಣವಿದ್ದ ಸ್ಕೂಟಿಯನ್ನು ಪಾರ್ಕ್ ಮಾಡಿ, ಮದ್ಯ ಸೇವಿಸಿ ಹೊರಬಂದ ನಂತರ ‘ನನ್ನ ಸ್ಕೂಟಿ ಕಳ್ಳತನವಾಗಿದೆ’ ಎಂದು ವ್ಯಕ್ತಿಯೊಬ್ಬ ರಂಪಾಟ ಮಾಡಿ ಸ್ಥಳಕ್ಕೆ ಪೊಲೀಸರನ್ನು ಕರೆಯಿಸಿದ ಘಟನೆ ಧಾರವಾಡದ ಸಂಗಮ ಚಿತ್ರಮಂದಿರದ ಬಳಿ ನಡೆದಿದೆ.
ಧಾರವಾಡದ ಗೋವನಕೊಪ್ಪ ನಿವಾಸಿ ಭೀಮಪ್ಪ ಜಡ್ಡಗಣ್ಣನವರ ರಂಪಾಟ ಮಾಡಿದ ಮದ್ಯವ್ಯಸನಿಯಾಗಿದ್ದಾನೆ. ಮೊದಲು ಬ್ಯಾಂಕಿಗೆ ತೆರಳಿದ್ದ ಈ ವ್ಯಕ್ತಿ, ೨ ಲಕ್ಷ ರೂಪಾಯಿ ನಗದು ಹಣ ಹಿಂಪಡೆದು ಸ್ಕೂಟಿ ಡಿಕ್ಕಿಯಲ್ಲಿ ಇಟ್ಟಿದ್ದನು. ನಂತರ ಅದೇ ರಸ್ತೆಯಲ್ಲಿರುವ ಬಾರ್ ಒಂದರ ಮುಂದೆ ತನ್ನ ಸ್ಕೂಟಿಯನ್ನು ಪಾರ್ಕ್ ಮಾಡಿ ಮದ್ಯ ಸೇವಿಸಲು ತೆರಳಿದ್ದನು. ಮದ್ಯ ಸೇವಿಸಿ ಹೊರಬಂದ ನಂತರ, “ನನ್ನ ಹಣ ಹಾಗೂ ಸ್ಕೂಟಿ ಕಾಣಿಸುತ್ತಿಲ್ಲ” ಎಂದು ಭೀಮಪ್ಪ ರಂಪಾಟ ಮಾಡಿ ೧೧೨ (ಪೋಲಿಸ್ ತುರ್ತು ವಾಹನ) ಸಂಖ್ಯೆಗೆ ಕರೆ ಮಾಡಿ ದೂರು ನೀಡಿದ್ದಾನೆ.
ತಕ್ಷಣವೇ ಸ್ಥಳಕ್ಕೆ ಬಂದ ೧೧೨ ಸಿಬ್ಬಂದಿ, ಸ್ಕೂಟಿಯ ನಂಬರ್ ಪಡೆದುಕೊಂಡು ಹುಡುಕಾಡಿದಾಗ ಸ್ಕೂಟಿ ಬಾರ್ ಮುಂದಿನ ಪಾರ್ಕಿಂಗ್ ಜಾಗದಲ್ಲೇ ಪತ್ತೆಯಾಗಿದೆ. ಮದ್ಯವ್ಯಸನಿಯಿಂದ ಕೀ ಪಡೆದುಕೊಂಡು ಸ್ಕೂಟಿ ಡಿಕ್ಕಿ ಪರಿಶೀಲಿಸಿದಾಗ, ನಗದು ಹಣದ ಬ್ಯಾಗ್ ಹಾಗೂ ವಾಹನ ಸುರಕ್ಷಿತವಾಗಿರುವುದು ಕಂಡುಬಂದಿದೆ. ಆದರೆ, ಈ ಮದ್ಯವ್ಯಸನಿಯ ಹುಚ್ಚಾಟದಿಂದ ಪೊಲೀಸರು ಕೆಲಕಾಲ ಹೈರಾಣಾಗಿದ್ದರು.
