Dharwad

ಕೆಎಂಎಫ್ ಹಾಲಿನ ದರ ಏರಿಕೆ: ಧಾರವಾಡದಲ್ಲಿ ಬೀದಿಗಿಳಿದು ಆಕ್ರೋಶ ಹೊರಹಾಕಿದ ಬಿಜೆಪಿ ಮಹಿಳಾ ಮಣಿಗಳು

Share

ಧಾರವಾಡ:ರಾಜ್ಯ ಸರ್ಕಾರ ಕೆಎಂಎಫ್ ಹಾಲಿನ ದರವನ್ನು 8 ರೂಪಾಯಿ ಏರಿಕೆ ಮಾಡಿರುವ ನಿರ್ಧಾರವನ್ನು ಖಂಡಿಸಿ ಹಾಗೂ ಬೆಲೆ ಇಳಿಸಿ ಸರ್ಕಾರದ ಖಜಾನೆಯಿಂದ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ, ಧಾರವಾಡದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಸುಭಾಷ್ ರಸ್ತೆಯಲ್ಲಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸೀಮಾ ಲದ್ವಾ ಮತ್ತು ಮಾಜಿ ಮೇಯರ್ ಜ್ಯೋತಿ ಪಾಟೀಲ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಮಹಿಳಾ ಮಣಿಗಳು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.

ಹಾಲಿನ ಕ್ಯಾನ್ ಜೊತೆಗೆ ಸಿಎಂ, ಡಿಕೆಶಿ ಪೋಸ್ಟರ್ ಹಿಡಿದು ಧಿಕ್ಕಾರ ಕೂಗಿ ಸರ್ಕಾರದ ನಡೆಯನ್ನು ಖಂಡಿಸಿದರು. ರಾಜ್ಯದಲ್ಲಿ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬೆಲೆಗಳ ಏರಿಕೆಯದೇ ಸಾಧನೆಯಾಗಿದೆ. ಮಧ್ಯಮ ಹಾಗೂ ಬಡ ಜನರು ಹೆಚ್ಚಾಗಿ ಉಪಯೋಗಿಸುವ ಹಾಲಿನ ದರವನ್ನು ಏಕಾಏಕಿ 8 ರೂಪಾಯಿ ಏರಿಕೆ ಮಾಡಿದ್ದಾರೆ.

ದೀಪಾವಳಿ ಹಬ್ಬದ ಸಮಯದಲ್ಲಿ ಈ ರೀತಿ ಬೆಲೆ ಏರಿಕೆ ಮಾಡಿದ್ದರೆ ಹೇಗೆ? ಬಡವರು, ಮಧ್ಯಮ ವರ್ಗದ ಜನರು ದೀಪಾವಳಿ ಹಬ್ಬ ಆಚರಣೆ ಮಾಡುವುದೇ ಬೇಡ್ವಾ ಎಂದು ಪ್ರಶ್ನೆ ಮಾಡಿದರು. ಈ ಕೂಡಲೇ ಸಿಎಂ, ಡಿಕೆಶಿಯವರು ಹಾಲಿನ ದರ ಇಳಿಸಬೇಕು, ಇಲ್ಲವಾದಲ್ಲಿ ನಿರಂತರ ಹೋರಾಟಕ್ಕೆ ಮುಂದಾಗುವುದಾಗಿ ಖಡಕ್ ಎಚ್ಚರಿಕೆ ನೀಡಿದರು.

Tags:

error: Content is protected !!