Dharwad

ಕೇಂದ್ರದ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಪ್ರಸ್ತಾಪಿಸಿ ನಂದಿನಿ ಹಾಲಿನ ದರ ಏರಿಕೆ ಸಮರ್ಥಿಸಿಕೊಂಡ ಸಚಿವ ಸಂತೋಷ್ ಲಾಡ್; ಬಿಜೆಪಿಗರಿಗೆ ಖಡಕ್ ಟಾಂಗ್

Share

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದಾಗ ಸಾಮಾನ್ಯವಾಗಿ ಎಲ್ಲ ಅಗತ್ಯ ವಸ್ತುಗಳ ಬೆಲೆಗಳೂ ಏರಿಕೆಯಾಗುತ್ತವೆ. ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ನಾವು ಹಾಲಿನ ದರವನ್ನು ಅತ್ಯಂತ ಕಡಿಮೆಯಾಗಿ ಏರಿಕೆ ಮಾಡಿದ್ದೇವೆ ಎಂದು ಹೇಳುವ ಮೂಲಕ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಧಾರವಾಡದ ಆರ್‌. ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಧಾರವಾಡ ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆದ 71ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 12 ವರ್ಷಗಳಿಂದ ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಹೆಚ್ಚಳವಾಗಿದೆ. ಆದರೆ ಕೇಂದ್ರ ಸರ್ಕಾರ ಯಾವುದೇ ಸಬ್ಸಿಡಿ ನೀಡುತ್ತಿಲ್ಲ. ಹಿಂದೆ 103 ಡಾಲರ್ ಇದ್ದಾಗ ಆಯಿಲ್ ಖರೀದಿ ಮಾಡುತ್ತಿದ್ದೆವು, ಈಗ ಅವರು ಸರಾಸರಿ 80 ಡಾಲರ್‌ನಂತೆ ಖರೀದಿ ಮಾಡುತ್ತಿದ್ದಾರೆ. ಈ ಹಿಂದೆ ಇದೇ ಬಿಜೆಪಿ ನಾಯಕರು ನಮ್ಮ ಮಾಜಿ ಪ್ರಧಾನಿಗಳಾದ ಡಾ. ಮನಮೋಹನ್ ಸಿಂಗ್ ಅವರನ್ನು ಗೇಲಿ ಮಾಡುತ್ತಿದ್ದರು. ಆದರೆ ಅವರು ಆ ಸಮಯದಲ್ಲಿ ಮೂರೂವರೆ ಲಕ್ಷ ಕೋಟಿ ರೂಪಾಯಿ ಸಬ್ಸಿಡಿ ನೀಡಿದ್ದರು. ಆಗ ಡೀಸೆಲ್ ಹಾಗೂ ಪೆಟ್ರೋಲ್ 50-60 ರೂಪಾಯಿಯಲ್ಲಿ ಸಿಗುತ್ತಿತ್ತು. ಭಾರತ ದೇಶದಲ್ಲಿ ರಿಲಾಯನ್ಸ್ ಬಂಕ್‌ಗಳು ಎಲ್ಲೂ ನಡಿತಾ ಇರಲಿಲ್ಲ, ಈಗ ರಿಲಾಯನ್ಸ್ ಬಂಕ್‌ನವರು ಎಷ್ಟು ದುಡ್ಡು ಮಾಡಿದ್ದಾರೆ? ಅದಾನಿ ಗ್ರೂಪ್‌ನವರು ಎಷ್ಟು ಹಣ ಮಾಡಿದ್ದಾರೆ ಎನ್ನುವುದರ ಬಗ್ಗೆ ಚರ್ಚೆಯಾಗಬೇಕು. ಅವರು ಯಾವ ದೌಲತ್ತಿನಲ್ಲಿ ಹಣ ಮಾಡುತ್ತಿದ್ದಾರೆ?

ಐದಾರು ವರ್ಷಗಳಿಂದ ರೈತರಿಗೆ ಅನುಕೂಲ ಮಾಡುತ್ತಿಲ್ಲ. ಎಲ್ಲಾ ಪ್ರಾಡಕ್ಟ್‌ಗಳ ಬೆಲೆ ಹೆಚ್ಚಳವಾಗಿದೆ. ಕೇಂದ್ರ ಸರ್ಕಾರ ಬೆಲೆ ಹೆಚ್ಚಳ ಮಾಡಿದರೆ ಯಾರೂ ಕೇಳುವುದಿಲ್ಲ. ನಾವು ಹಾಲಿಗೆ 8 ರೂಪಾಯಿ ದರ ಹೆಚ್ಚಳ ಮಾಡಿದರೆ ನಮ್ಮನ್ನು ಪ್ರಶ್ನೆ ಮಾಡುತ್ತಾರೆಯೇ? ಕೇಂದ್ರ ಸರ್ಕಾರ 12 ವರ್ಷಗಳಲ್ಲಿ ತನಗೆ ಬೇಕೆಂದಾಗ ಡೀಸೆಲ್, ಪೆಟ್ರೋಲ್ ಬೆಲೆ ಹೆಚ್ಚಳ ಮಾಡಿದೆ. ಗುಜರಾತ್‌ನಲ್ಲಿ ಅಮೂಲ್ ಹಾಲು ಇದೆ, ಅದನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಾರೆ. ನಾನು ಈ ದರ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತೇನೆ. ರಾಜ್ಯದಲ್ಲಿ ಬರಗಾಲ ಇರುವ ಕಾರಣಕ್ಕೆ ರೈತರಿಗೆ ಅನುಕೂಲವಾಗಲಿ ಎಂದು 8 ರೂಪಾಯಿ ಹೆಚ್ಚಳ ಮಾಡಿದ್ದೇವೆ ಎಂದರು.

ಇನ್ನು ಕಬ್ಬು ಬೆಳೆಗಾರರ ಹೋರಾಟದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರ ಹಾಗೂ ಸಚಿವರುಗಳು ಹೋರಾಟಗಾರರ ಜೊತೆ ಇರುತ್ತೇವೆ. ಇದಕ್ಕೆ ಕಡಿವಾಣ ಹಾಕಬೇಕು ಎಂದರೆ ಬಡ್ಡಿಗೆ ಹೋಗಬೇಕು. ವರ್ಷದಲ್ಲಿ 6 ಸಾವಿರ ಕೋಟಿ ಲೀಟರ್‌ನಷ್ಟು ಪೆಟ್ರೋಲ್ ಖರ್ಚು ಮಾಡುತ್ತಿದ್ದೇವೆ. ಪೆಟ್ರೋಲ್‌ಗೆ 20% ಎಥೆನಾಲ್ ಮಿಕ್ಸ್ ಆಗುತ್ತದೆ. ಎಥೆನಾಲ್ ಖರೀದಿ ಮಾಡುವ ದರ 55 ರೂಪಾಯಿ ಇದೆ. ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ತಯಾರಾಗುತ್ತದೆ. ಎಥೆನಾಲ್ ಪ್ರೊಡ್ಯೂಸ್ ಮಾಡಿ ಎಂದು ಕೇಂದ್ರ ಸರ್ಕಾರವೇ ಹೇಳಿದೆ. ಎಥೆನಾಲ್ ಪ್ಲಾಂಟ್, ಶುಗರ್ ಪ್ಲಾಂಟ್‌ಗೆ ಅನುಮತಿ ಕೊಡುವುದು ಕೇಂದ್ರ ಸರ್ಕಾರ. ಎಫ್‌ಆರ್‌ಪಿ ಎಲ್ಲವನ್ನು ನಿರ್ಧಾರ ಮಾಡುವುದು ಕೇಂದ್ರ ಸರ್ಕಾರ. ಯುಪಿ, ಗುಜರಾತ್‌ಗೆ ಕೋಟಾ ಜಾಸ್ತಿ, ಕರ್ನಾಟಕಕ್ಕೆ ಕೋಟಾ ಕಡಿಮೆ ನೀಡಲಾಗಿದೆ. ಎಲ್ಲಿ ಪ್ಲಾಂಟ್ ಕಡಿಮೆ ಇದೆಯೋ ಅಲ್ಲಿ ಕೋಟಾ ಜಾಸ್ತಿ ಮಾಡುತ್ತಾರೆ. ಶುಗರ್ ಇರುವುದು ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ; ಎಥೆನಾಲ್ ಅನ್ನು 55 ರೂಪಾಯಿಗೆ ಖರೀದಿ ಮಾಡಿ ಮಾರ್ಕೆಟ್‌ನಲ್ಲಿ 110 ರೂಪಾಯಿಗೆ ಮಾರಾಟ ಮಾಡುತ್ತೀರಿ. ಅದರಲ್ಲಿ ನಾಲ್ಕು ರೂಪಾಯಿ ಕೊಟ್ಟರೆ ರೈತರು ಬದುಕುತ್ತಾರೆ.

ರೈತರ ಹೋರಾಟಕ್ಕೆ ನಮ್ಮ ಸರ್ಕಾರ ಬೆಂಬಲವಾಗಿ ಇದೆ. ಕಬ್ಬು ಒಣಗುತ್ತಿದೆ, ರೈತರಿಗೆ ಎಂಎಸ್‌ಪಿ ನಿಗದಿಯಾಗುವವರೆಗೂ ಹೋರಾಟ ನಡೆಯಲಿ. ಬ್ರೆಜಿಲ್‌ನಿಂದ 10 ಲಕ್ಷ ಮೆಟ್ರಿಕ್ ಟನ್ ಶುಗರ್ ಇಂಪೋರ್ಟ್ ಮಾಡುತ್ತಿದ್ದೀರಿ, ಅದನ್ನು ಕೇಳುವವರಿಲ್ಲ, ಹೇಳುವವರಿಲ್ಲ. 12 ವರ್ಷಗಳಲ್ಲಿ ಕೇಂದ್ರ ಸರ್ಕಾರ ಮಾಡಿದ ಬೆಲೆ ಏರಿಕೆ ಬಗ್ಗೆ ಯಾರೂ ಕೇಳುವುದಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಜೊತೆಗೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ದೇಶದಲ್ಲಿ ಮತದಾರರನ್ನು ಡಿಲೀಟ್ ಮಾಡಲಾಗಿದೆ, ಅದಕ್ಕಾಗಿ ಹೋರಾಟ ಮಾಡಲಾಗುತ್ತಿದೆ. 70 ವರ್ಷದಿಂದ ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಅದೇ ಪಾಕಿಸ್ತಾನ್, ಅದೇ ಬಾಂಗ್ಲಾದೇಶ, ಅದೇ ಮುಸ್ಲಿಂ ಎನ್ನುವುದನ್ನೇ ಹೇಳಿಕೊಂಡು ಬಂದಿದ್ದಾರೆ. 12 ವರ್ಷಗಳಲ್ಲಿ ಬಿಜೆಪಿ ಏನು ಮಾಡಿದೆ ಎಂಬುದು ಸ್ವತಃ ವಿಸ್ತಾರವಾಗಿ ಚರ್ಚೆಯಾಗಲಿ. ಈಗ ದೇಶ ಯಾವ ಮಟ್ಟದಲ್ಲಿದೆ ಎಂದು ವಿಚಾರ ಮಾಡಲಿ. ಕೇಂದ್ರ ಸರ್ಕಾರದ ಲೋಪದೋಷಗಳನ್ನು ಯಾರೂ ತೋರಿಸುವುದಿಲ್ಲ. ಬಹುತೇಕ ಮಾಧ್ಯಮಗಳು ಕೇಂದ್ರ ಸರ್ಕಾರದ ಅಧೀನದಲ್ಲಿವೆ. ಅವರು ತೋರಿಸುವುದೇ ಬೇರೆ, ನಮ್ಮ ಬಗ್ಗೆ ನೆಗೆಟಿವ್ ತೋರಿಸುತ್ತಾರೆ, ಅವರ ಬಗ್ಗೆ ಪಾಸಿಟಿವ್ ತೋರಿಸುತ್ತಾರೆ. ಜನಸಾಮಾನ್ಯರಿಗೆ ಕೇಂದ್ರ ಸರ್ಕಾರದ ವೈಫಲ್ಯಗಳ ಬಗ್ಗೆ ಮಾಧ್ಯಮಗಳಲ್ಲಿ ತೋರಿಸಲು ಅವಕಾಶ ನೀಡುತ್ತಿಲ್ಲ. ಬಿಜೆಪಿಯ ಸಾಧನೆ ಏನೆಂದರೆ ಬರೀ ಪಬ್ಲಿಸಿಟಿ ಮಾತ್ರ ಮಾಡಿಕೊಳ್ಳುತ್ತಿರುವುದು. ಪಬ್ಲಿಸಿಟಿ ಬಿಟ್ಟರೆ ಪರ್ಫಾರ್ಮೆನ್ಸ್ ಎಲ್ಲಿದೆ ಎಂದು ಪ್ರಶ್ನಿಸಿದರು.

Tags:

error: Content is protected !!