ಮದುವೆಯಾಗುವುದಾಗಿ ನಂಬಿಸಿ ನಾಲ್ಕು ವರ್ಷ ಪ್ರೀತಿಸಿ, ಬಳಿಕ ಮದುವೆಯಾಗುವಂತೆ ಒತ್ತಾಯಿಸಿದ ಯುವತಿಯನ್ನೇ ಕೊಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಾಯಬಾಗ ತಾಲೂಕಿನ ಹಾರುಗೇರಿ ಗ್ರಾಮದ ರಕ್ಷಿತಾ ಸಾರಿಕರ್ (25) ಕೊಲೆಯಾದ ಯುವತಿ. ಅಥಣಿ ತಾಲೂಕಿನ ಅಡಳಹಟ್ಟಿ ಗ್ರಾಮದ ಬಸಪ್ಪ ಸಿದ್ದಪ್ಪ ಸಾತನ್ನವಣ್ಣರ ಕೊಲೆ ಆರೋಪಿಯಾಗಿದ್ದಾನೆ.
ಆರೋಪಿಯು ರಕ್ಷಿತಾಳಿಗೆ ಮದುವೆಯಾಗುವುದಾಗಿ ನಂಬಿಸಿ ಕಳೆದ 4 ವರ್ಷಗಳಿಂದ ಪ್ರೀತಿಸುತ್ತಿದ್ದ. ಆದರೆ ಮದುವೆಯ ವಿಚಾರವನ್ನು ಮುಂದೂಡುತ್ತಾ ಬಂದಿದ್ದರಿಂದ ಅ. 28 ರಂದು ಆಕೆಯನ್ನು ಹಾರುಗೇರಿಯಿಂದ ಗೋಕಾಕ್ ಫಾಲ್ಸ್‌ಗೆ ಕರೆದುಕೊಂಡು ಬಂದಿದ್ದಾನೆ.
ಸಂಜೆ ಸುಮಾರು 4 ಗಂಟೆಗೆ ಫಾಲ್ಸ್ ರಸ್ತೆಯ ಪಕ್ಕದ ಕಟ್ಟೆಯ ಮೇಲೆ ಇಬ್ಬರೂ ಕುಳಿತು ಮಾತನಾಡುತ್ತಿದ್ದಾಗ, ಮದುವೆಯಾಗುವುದಾಗಿ ಹೇಳಿ ಇಷ್ಟು ವರ್ಷ ಕಳೆದರೂ ಈಗ ಏಕೆ ಮದುವೆಯಾಗುತ್ತಿಲ್ಲ ಎಂದು ರಕ್ಷಿತಾ ಪ್ರಶ್ನಿಸಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಆಕ್ರೋಶಗೊಂಡ ಆರೋಪಿಯು ಯುವತಿಯ ಕೆನ್ನೆಗೆ ಬಲವಾಗಿ ಹೊಡೆದು, ಕೈಯಿಂದ ಕುತ್ತಿಗೆ ಹಿಸುಕಿ ಬಳಿಕ ವೇಲಿನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ ಎಂದು ಯವತಿ ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ.
ನಂತರ ಮೃತದೇಹವನ್ನು ಫಾಲ್ಸ್‌ನ ಗುಡ್ಡದ ಇಳಿಜಾರಿನಲ್ಲಿರುವ ಮುಳ್ಳಿನ ಪೊದೆಗಳ ಮಧ್ಯೆ ಎಸೆದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ. ಈ ಕುರಿತು ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
