ಹಾಲಿನ ದರ ಏರಿಕೆಯ ಬೆನ್ನಲ್ಲೇ ರಾಜ್ಯ ಸಾರಿಗೆ ಬಸ್ ದರವನ್ನು ಪರಿಷ್ಕರಣೆ ಮಾಡಲಾಗಿದ್ದು, ಕನಿಷ್ಠ 4ರಿಂದ 18 ರೂಪಾಯಿ ಏರಿಕೆ ಮಾಡಲಾಗಿದೆ. ವಾಯುವ್ಯ, ಕಲ್ಯಾಣ ಕರ್ನಾಟಕ ಮತ್ಯು ಕೆಎಸ್ಆರ್ಟಿಸಿ ಸಾರಿಗೆ ನಿಗಮಗಳಲ್ಲಿ ಶೇ.23 ಹಾಗೂ ಬಿಎಂಟಿಸಿ ಶೇ. 35ರಷ್ಟು ಪ್ರಯಾಣ ದರದಲ್ಲಿ ಏರಿಸಲಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿ ಆಗಲಿದೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಾರಿಗೆ ಸಚಿವ ಬೈರತಿ ಸುರೇಶ್, ಡಿಸೇಲ್ ಬೆಲೆ ಏರಿಕೆ, ನೌಕರರ ವೇತನ ಹೆಚ್ಚಳ ಹಾಗೂ ನಿಗಮಗಳ ಹೊಣೆಗಾರಿಕೆ ಹಾಗೂ ಸಾಲ ಪ್ರಮಾಣ ಅಧಿಕವಾಗಿದೆ. ಕಳೆದ 10 ವರ್ಷಗಳಲ್ಲಿ ಬಿಎಂಟಿಸಿಯಲ್ಲಿ ಒಂದು ಬಾರಿ ಹಾಗೂ ಇನ್ನುಳಿದ ಮೂರು ನಿಗಮಗಳಲ್ಲಿ ಎರಡು ಬಾರಿ ಪ್ರಯಾಣ ದರ ಏರಿಕೆ ಮಾಡಲಾಗಿದೆ. ಹೀಗಾಗಿ ಸಾರಿಗೆ ಇಲಾಖೆಯಲ್ಲಿ ನಿಗಮಗಳು ನಷ್ಟದಲ್ಲಿವೆ. ನಷ್ಟ ಪ್ರಮಾಣ ಇಳಿಸಲು ದರ ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ 25,125 ಬಸ್ಗಳಲ್ಲಿ 1.3 ಲಕ್ಷ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಪ್ರತಿ 24,179 ರೂಟ್ಗಳು ಕಾರ್ಯನಿರ್ವಹಿಸುತ್ತಿವೆ. ನಾಲ್ಕು ನಿಗಮಗಳಿಂದ ಪ್ರತಿ ದಿನ 1.24 ಲಕ್ಷ ಪ್ರಯಾಣಿಸುತ್ತಿದ್ದಾರೆ. ಶಕ್ತಿ ಯೋಜನೆ ಬಳಿಕ 74 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಉಚಿತ ಪ್ರಯಾಣ ದರದಿಂದ ಅಥವಾ ಶಕ್ತಿ ಯೋಜನೆಯಿಂದ ನಷ್ಟವಾಗುತ್ತಿಲ್ಲ. ಪ್ರತಿ ಟಿಕೆಟ್ಗೆ ಸರ್ಕಾರದಿಂದ ಅನುದಾನ ನೀಡಲಾಗುತ್ತಿದೆ. ನಷ್ಟದ ಬಗ್ಗೆ ತಪ್ಪು ಕಲ್ಪನೆ ಮೂಡಿಸಲಾಗುತ್ತಿದೆ. ಡಿಸೇಲ್ ಬೆಲೆ, ನೌಕರರ ವೇತನ ಏರಿಕೆ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ದರ ಏರಿಸುವ ಅಧಿಕಾರ ನಿಗಮಗಳಿಗಿದೆ. 2023ರಲ್ಲಿ ಎಂ.ಆರ್. ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಈ ಕುರಿತು ಏಕ ಸಮಿತಿ ರಚಿಸಲಾಗಿತ್ತು. ಸಮಿತಿ ನೀಡಿದ ವರದಿಯನ್ನ ನಿಗಮಗಳು ಜಾರಿ ಮಾಡಿಲ್ಲ. ಬಳಿಕ ಅತುಲ್ ಕುಮಾರ್ ತಿವಾರಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿಯು ನಾಲ್ಕು ನಿಗಮಗಳಲ್ಲಿರುವ ಪ್ರಸ್ತುತ ಸ್ಥಿತಿಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ನೀಡಿದೆ. ಕಾಲ ಕಾಲಕ್ಕೆ ಡಿಸೇಲ್ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇದೆ. ಬೆಲೆ ಏರಿಕೆ ಅನುಗುಣವಾಗಿ ಪ್ರಯಾಣ ದರ ಏರಿಕೆ ಮಾಡಬೇಕಾದ ಅನಿವಾರ್ಯವಾಗಿದೆ ಎಂದು ಸಚಿವ ಹೇಳಿದರು.
