State

ಬೆಂಗಳೂರಿನಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ: 71 ಸಾಧಕರಿಗೆ ಸಿಎಂ ಡಿಕೆಶಿ ಗೌರವ

Share

ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 71 ಮಂದಿ ಸಾಧಕರಿಗೆ 2026ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರದಾನ ಮಾಡಿದರು.
ಸಮಾಜ ಸೇವೆ, ರಂಗಭೂಮಿ, ಸಂಗೀತ, ಸಾಹಿತ್ಯ ಸೇರಿದಂತೆ ವಿವಿಧ ರಂಗದಲ್ಲಿ ಸಾಧನೆಗೈದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಿಎಂ, ರಾಜ್ಯದಲ್ಲಿ ಲಕ್ಷಾಂತರ ಮಂದಿ ಸಾಧಕರಿದ್ದಾರೆ.‌ ಸೀಮಿತ ಸಂಖ್ಯೆಯಲ್ಲಿ ಪ್ರಶಸ್ತಿ ನೀಡಲು ಸಾಧ್ಯವಾಗಿದೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿದ್ದಾರೆ. ಪ್ರಶಸ್ತಿ ಪಡೆದ ಎಲ್ಲರಿಗೂ ಅಭಿನಂದನೆಗಳು ಎಂದರು.

ಕನ್ನಡ ಭಾಷೆ ರಾಜ್ಯದಲ್ಲಿ ಅಧಿಪತಿಯಾಗಿದೆ. ಕನ್ನಡಮ್ಮ ಗೂಡು ಕಟ್ಟಿದ್ದ ಹಾಗೂ ಭುವನೇಶ್ವರಿ ಅಮ್ಮನ ಕಟ್ಟಿದ ಹಬ್ಬ ಇದಾಗಿದೆ. ನುಡಿ ಉಳಿದರೆ ನಾಡು.‌ ನಾಡು ಉಳಿದರೆ ನುಡಿ. ಕನ್ನಡ ನಾಡಿನ ಜನರ ಆಶೀರ್ವಾದದಿಂದ ಪುರಸ್ಕೃತರಿಗೆ ಪ್ರಶಸ್ತಿ ಒಲಿದಿದೆ. ಕರ್ನಾಟಕ ಏಕೀಕರಣ ಮಾಡಿದವರು ಹಾಗೂ ಕರ್ನಾಟಕದ ಹೆಸರಿಟ್ಟಿದ್ದು ಕಾಂಗ್ರೆಸ್ ಪಕ್ಷವಾಗಿದೆ. ದೇವರಾಜ ಅರಸು ಅವರು ಕರ್ನಾಟಕವನ್ನು ನಾಮಕರಣ ಮಾಡಿದವರಾಗಿದ್ದು, ಅವರನ್ನು ಸ್ಮರಿಸಬೇಕಿದೆ ಎಂದು ತಿಳಿಸಿದರು.

ನಾಡಧ್ವಜ ಭಾವುಟವನ್ನು ಅಧಿಕೃತ ಮಾಡಲು ಸರ್ಕಾರ ಚಿಂತಿಸಿದ್ದು, ಮುಂದಿನ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಕರ್ನಾಟಕ ದೇಶದ ಹೆಬ್ಬಾಗಿಲಾಗಿದೆ‌. ಭಾರತದ ಬಲ ಕರ್ನಾಟಕ ಎಂಬ ನಿಟ್ಟಿನಲ್ಲಿ ಇನ್ನಷ್ಟು ಕೆಲಸ ಮಾಡಬೇಕಿದೆ. ಕನ್ನಡ, ಕರ್ನಾಟಕ, ಕನ್ನಡಿಗ ಎಂಬ ತತ್ವದಡಿ ಸರ್ಕಾರ ಕೆಲಸ ಮಾಡುತ್ತಿದೆ. ಹೊರ ರಾಜ್ಯ ಹಾಗೂ ಹೊರದೇಶಗಳಲ್ಲಿ ಹಲವರು ಸಂಘಟನೆ ಹೆಸರಿನಲ್ಲಿ ಕನ್ನಡ ಭಾಷೆ ವಿಸ್ತರಿಸುವಲ್ಲಿ ಶ್ರಮಿಸಿದ್ದಾರೆ. ಕನ್ನಡ ನಾಡು-ಉಳಿಸಿ ಬೆಳೆಸುವವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವುದಾಗಿ ಭರವಸೆ ನೀಡಿದ್ದೆ. ಅದರಂತೆ ಪ್ರಶಸ್ತಿ ನೀಡಿದ್ದೇನೆ ಎಂದರು‌.

ಐಟಿ-ಬಿಟಿ ಕಂಪನಿಯಲ್ಲಿ ಕನ್ನಡಿಗರಿಗೆ ಅವಕಾಶವಿಲ್ಲ ಎಂಬ ವಿಚಾರ ಸಂಬಂಧ, ನಾಡು-ನುಡಿ ವಿಚಾರದ ಹಿಂದೆ ಸರಿಯುವ ಪ್ರಶ್ನೆಯಿಲ್ಲ. ಬೆಂಗಳೂರು ನಗರದಲ್ಲಿ 1.45 ಕೋಟಿ ಜನರಿದ್ದು, ಈ ಪೈಕಿ 45 ಲಕ್ಷ ಮಂದಿ ಹೊರಗಿನಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸ್ಥಳೀಯರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಕಂಪನಿಗಳಿಗೆ ಈಗಾಗಲೇ ತಾಕೀತು ಮಾಡಿದ್ದೇನೆ. ಶಾಲಾ, ಕಾಲೇಜು ಸೇರಿದಂತೆ ಎಲ್ಲ ವಲಯಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಬೇಕು ಈಗಾಗಲೇ ಆದೇಶಿಸಲಾಗಿದೆ ಎಂದು ಸಿಎಂ ಹೇಳಿದರು.

2018ರಲ್ಲಿ ನಡೆದ ಸಮೀಕ್ಷೆಯೊಂದರಲ್ಲಿ ಅತಿ ಹೆಚ್ಚು ಭಾಷೆ ಮಾತನಾಡುವ ಪೈಕಿ 8ನೇ ಭಾಷೆ ಕನ್ನಡವಾಗಿದೆ. ಕನ್ನಡ ಕಲಿಕೆ ಅನಿವಾರ್ಯತೆ‌. ಹೀಗಾಗಿ ಕನ್ನಡ ಕಲಿಯಲೇಬೇಕು. ಕನ್ನಡಿಗರ ಹಕ್ಕಿನ ಬಗ್ಗೆ ಪ್ರಶ್ನೆ ಬಂದಾಗ ಎಲ್ಲರೂ ಹೋರಾಟ ಮಾಡಿದ್ದಾರೆ. ಪ್ರಶಸ್ತಿ ಪಡೆಯಲು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಫೋನ್ ಮಾಡಿಸಿದಾಗ ನಯವಾಗಿ ತಿರಸ್ಕರಿಸಿದರು. ನಾನು ಚಿಕ್ಕ ಹುಡುಗನಿದ್ದಾಗ ಅವರ ಭಾಷಣ ಕೇಳುತ್ತಿದ್ದೆ ಎಂದು ಸ್ಮರಿಸಿದರು.

ಸಚಿವ ಶಿವರಾಜ ಎಸ್.ತಂಗಡಗಿ ಮಾತನಾಡಿ, ಕನ್ನಡ ಮಾತನಾಡುವ ಭಾಷೆಯಲ್ಲ. ಅದೊಂದು ಬದುಕಿನ ಸಂಸ್ಕೃತಿಯಾಗಿದೆ. ಕರ್ನಾಟಕ ಏಕೀಕರಣದ ಹಿಂದೆ ಇದ್ದ ಆಲೂರು ವೆಂಕಟರಾಯರನ್ನು ಇಂದು ನೆನಪಿಸಿಕೊಳ್ಳಬೇಕಿದೆ. ಮಕ್ಕಳ ಮೊದಲ ಮಾತು ಕನ್ನಡವಾಗಿದೆ. ಉದ್ಯೋಗ, ಆಡಳಿತ ಹಾಗೂ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಮೊದಲು ಕನ್ನಡಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ‌. 2024ರಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಕಾಯ್ದೆ ಜಾರಿ ತರಲಾಗಿದೆ‌.‌ ಸರ್ಕಾರಿ ಹಾಗೂ ವಾಣಿಜ್ಯ ಅಂಗಡಿ-ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ‌.60ರಷ್ಟು ಕನ್ನಡ ಕಡ್ಡಾಯಗೊಳಿಸಲಾಗಿದೆ‌. ಈ ಬಗ್ಗೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ ಎಂದರು.

ಐಟಿ ಕ್ಷೇತ್ರ ಸೇರಿದಂತೆ ಎಲ್ಲಾ ವಲಯಗಳಲ್ಲಿ ಕನ್ನಡ ಕಡ್ಡಾಯವಾಗಬೇಕು.‌ ಪಾಲನೆಯಾಗದಿದ್ದರೆ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ತಂಗಡಗಿ ಎಚ್ಚರಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ನ್ಯಾಯವಾದಿ ಬಿ.ವಿ.ಆಚಾರ್ಯ, ನಾನು ಮಾತನಾಡುವುದಕ್ಕೆ ಫೀಸ್ ತೆಗೆದುಕೊಳ್ಳುತ್ತಿದ್ದೆ. ಸಿಎಂ ಪರವಾಗಿ ಮಾತನಾಡಿದಕ್ಕೂ ಶಿವಕುಮಾರ್ ಅವರು ಫೀಸ್ ಕೊಟ್ಟಿದ್ದಾರೆ ಎಂದು ಹಾಸ್ಯ ಮಾಡಿದ ಅವರು, ಪ್ರಶಸ್ತಿ ನೀಡಿದ್ದಕ್ಕೆ ರಾಜ್ಯ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು.
ಪ್ರಶಸ್ತಿ ಸ್ವೀಕಾರ ಕಾರ್ಯಕ್ರಮದಲ್ಲಿ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಸೇರಿದಂತೆ ಮೂರು-ನಾಲ್ಕು ಮಂದಿ ಗೈರಾಗಿದ್ದರು.

Tags:

error: Content is protected !!