Raibag

ಸಂಶಯ ಪಿಶಾಚಿಗೆ ಪತ್ನಿಯನ್ನೇ ಕಡಿದು ಕೊಂದ ಪತಿ ಅರೆಸ್ಟ್!!!

Share

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ಪತ್ನಿಯ ಚಾರಿತ್ರ್ಯದ ಮೇಲೆ ಸಂಶಯಪಟ್ಟು ಪತಿಯೇಕುಡುಗೋಲಿನಿಂದ ಪತ್ನಿಯ ತಲೆ ಕಡಿದು ಬರ್ಬರವಾಗಿ ಕೊಲೆ ಮಾಡಿದ್ದು, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯ ಮಾಡಲಗಿ (ಮಾರಾಡಿ) ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಜರುಗಿದೆ. ಕಳೆದ ಆರು ತಿಂಗಳಿಂದ ತನ್ನ ಪತ್ನಿ ಕಲ್ಲವ್ವಳ ಮೇಲೆ ವಿನಾಕಾರಣ ಸಂಶಯಪಡುತ್ತಿದ್ದ ಸದಾಶಿವ ರಾಮಾ @ ರಾಮಪ್ಪ ಮರಡಿ (67) ಎಂಬಾತ, ಅಕ್ಟೋಬರ್ 1ರಂದು ಸಂಜೆ ಜಮೀನಿನಲ್ಲಿ ಮೇವು ತರಲು ಹೋಗಿದ್ದ ವೇಳೆ ಕುಡುಗೋಲಿನಿಂದ ಆಕೆಯ ತಲೆಯನ್ನು ಕಡಿದು ಕ್ರೂರವಾಗಿ ಕೊಲೆ ಮಾಡಿದ್ದಾನೆ. ಮೃತಳ ಮಗ ಚಿಕ್ಕಯ್ಯ ಸದಾಶಿವ ಮರಡಿ ನೀಡಿದ ದೂರಿನ ಮೇರೆಗೆ ರಾಯಬಾಗ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ರಾಮರಾಜನ್ ಹಾಗೂ ಹೆಚ್ಚುವರಿ ಎಸ್‌ಪಿ ಆರ್. ಬಿ. ಬಸರಗಿ ಅವರ ಮಾರ್ಗದರ್ಶನದಲ್ಲಿ, ಅಥಣಿ ಡಿವೈಎಸ್‌ಪಿ ಪ್ರಶಾಂತ ಜ. ಮುನ್ನೋಳಿ ನೇತೃತ್ವದಲ್ಲಿ ರಾಯಬಾಗ ಪೊಲೀಸ್ ಇನ್ಸ್‌ಪೆಕ್ಟರ್ ಎಂ. ಎಂ. ಡಪ್ಪಿನ್ ಹಾಗೂ ಪಿಎಸ್‌ಐ ನಂದೀಶ ಅವರನ್ನೊಳಗೊಂಡ ವಿಶೇಷ ತಂಡವು ತಕ್ಷಣವೇ ಕಾರ್ಯಾಚರಣೆ ನಡೆಸಿ ಕೃತ್ಯ ಎಸಗಿದ ಆರೋಪಿ ವೃದ್ಧ ಪತಿಯನ್ನು ದಸ್ತಗಿರಿ ಮಾಡಿದೆ. ಈ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸ್ ತಂಡದ ಕಾರ್ಯವೈಖರಿಯನ್ನು ಎಸ್‌ಪಿ ರವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Tags:

error: Content is protected !!