ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿಗಳ ಪರ್ವ ಶುರುವಾಗಿದೆ. ಪಟ್ಟಣದ ಐತಿಹಾಸಿಕ ಮಾ ಸಾಹೇಬಾ ದರ್ಗಾದ ಜೀರ್ಣೋದ್ಧಾರ ಹಾಗೂ ನೂತನ ಸಭಾಭವನ ನಿರ್ಮಾಣಕ್ಕೆ ಸಚಿವ ಯು.ಟಿ. ಖಾದರ್ ಅವರು ಇಂದು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸ್ಥಳೀಯ ಶಾಸಕ ಮಹೇಂದ್ರ ತಮ್ಮಣ್ಣವರ ಉಪಸ್ಥಿತರಿದ್ದು, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯ ಭರವಸೆ ನೀಡಿದರು.


ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಯು.ಟಿ. ಖಾದರ್, ಕುಡಚಿಯ ಪವಿತ್ರ ದರ್ಗಾ ಶರೀಫ್ ಸರ್ವಧರ್ಮಗಳ ಸೌಹಾರ್ದತೆಯ ಕೇಂದ್ರವಾಗಿದೆ ಎಂದು ಬಣ್ಣಿಸಿದರು. ಈ ದರ್ಗಾದ ಪರಂಪರೆ ಮತ್ತು ಸೌಹಾರ್ದತೆಯ ಸಂದೇಶವನ್ನು ಇಂದಿನ ಯುವಜನಾಂಗ ಹಾಗೂ ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸವಾಗಬೇಕು ಎಂದರು. ದರ್ಗಾ ಅಭಿವೃದ್ಧಿಗೆ ಈಗಾಗಲೇ 2 ಕೋಟಿ ರೂ. ಹಾಗೂ ಸಮುದಾಯ ಭವನಕ್ಕೆ 1 ಕೋಟಿ ರೂ. ಅನುದಾನ ನೀಡಲಾಗಿದ್ದು, ಉಳಿದ ಮಸೀದಿಗಳ ಅಭಿವೃದ್ಧಿಗೂ ಶೀಘ್ರದಲ್ಲೇ ಅನುದಾನ ಬಿಡುಗಡೆಯ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಭರವಸೆ ನೀಡಿದರು.

ಇದೇ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ತಮ್ಮ ಸರ್ಕಾರದ ಅವಧಿಯಲ್ಲಿ ರೈತರು ಮತ್ತು ಬಡವರಿಗಾಗಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದರು. ಸಣ್ಣ ನೀರಾವರಿ ಇಲಾಖೆಯಿಂದ ನೀರಾವರಿ ಸೌಲಭ್ಯ, 3 ಕೋಟಿ ರೂ. ವೆಚ್ಚದಲ್ಲಿ ಐ.ಬಿ. ನಿರ್ಮಾಣ, ಕಬ್ಬು ಸಾಗಾಣಿಕೆಗೆ ಅನುಕೂಲವಾಗುವಂತೆ ರಸ್ತೆಗಳ ಅಗಲೀಕರಣ ಹಾಗೂ ಬಡವರಿಗೆ ಕೇವಲ 20 ರೂ. ವೆಚ್ಚದಲ್ಲಿ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ಸೇವೆಯನ್ನು ಶ್ಲಾಘಿಸಿದರು. ಅಲ್ಲದೆ, ಎಸ್‌ಸಿ, ಎಸ್‌ಟಿ ಮತ್ತು ಅಲ್ಪಸಂಖ್ಯಾತ ಬಡವರಿಗೆ 400 ಮನೆಗಳನ್ನು ನಿರ್ಮಿಸಿಕೊಡುವುದರ ಜೊತೆಗೆ, ಅಲ್ಪಸಂಖ್ಯಾತ ಕಾಲೋನಿಗಳನ್ನು ಗುಡಿಸಲು ಮುಕ್ತಗೊಳಿಸಿ ಮೂಲಭೂತ ಸೌಕರ್ಯ ಕಲ್ಪಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ಥಳೀಯ ಶಾಸಕ ಮಹೇಂದ್ರ ತಮ್ಮಣ್ಣವರ ಮಾತನಾಡಿ, ಕ್ಷೇತ್ರದಲ್ಲಿ ಎಸ್.ಎಸ್.ಸಿ.ಪಿ. ಸೇರಿದಂತೆ ವಿವಿಧ ಅನುದಾನಗಳಡಿ ಬಹುತೇಕ ಎಲ್ಲಾ ಹಳೆಯ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಮಾಹಿತಿ ನೀಡಿದರು. ಇದೇ ವೇಳೆ, ಪಟ್ಟಣದ 7 ಮೀಟರ್ ಅಗಲದ ರಸ್ತೆಯನ್ನು 9 ಮೀಟರ್‌ಗೆ ವಿಸ್ತರಿಸಿ ಅಭಿವೃದ್ಧಿಪಡಿಸುವಂತೆ ಸಚಿವರಲ್ಲಿ ವಿಶೇಷ ಮನವಿ ಸಲ್ಲಿಸಿದರು. ಕೊಲ್ಲಾಪುರದಿಂದ ವಿಮಾನದ ಮೂಲಕ ತೆರಳುವ ತುರ್ತು ಇದ್ದ ಕಾರಣ ಸಚಿವರು ಕಾರ್ಯಕ್ರಮ ಮುಗಿಸಿ ನಿರ್ಗಮಿಸಿದರು.

