ನೆರೆ ರಾಜ್ಯ ಮಹಾರಾಷ್ಟ್ರದ ಪ್ರಸಿದ್ಧ ಶಕ್ತಿಪೀಠ… ಲಕ್ಷಾಂತರ ಭಕ್ತರ ಆರಾಧ್ಯ ದೈವವಾದ ತುಳಜಾಪುರದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಕೋಜಾಗಿರಿ ಹುಣ್ಣಿಮೆಯ ಸಂಭ್ರಮ ಮನೆಮಾಡಿದೆ. ನವರಾತ್ರಿ ಉತ್ಸವದ ಬಳಿಕ ಮಂಚಕದ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ತಾಯಿ ಭವಾನಿ, ಕೋಜಾಗಿರಿ ಹುಣ್ಣಿಮೆಯ ಪುಣ್ಯ ಸಂದರ್ಭದಲ್ಲಿ ಮತ್ತೆ ಸಿಂಹಾಸನಾರೂಢಳಾಗಿದ್ದಾಳೆ. ವಿಶೇಷ ಧಾರ್ಮಿಕ ವಿಧಿ-ವಿಧಾನಗಳು, ಪೂಜೆ-ಪುನಸ್ಕಾರಗಳು ಹಾಗೂ ಸಾಂಪ್ರದಾಯಿಕ ಛಬಿನ ಉತ್ಸವ ಈ ಪರ್ವದ ಪ್ರಮುಖ ಆಕರ್ಷಣೆ. ‘ಆಯಿ ರಾಜಾ ಉದೋ ಉದೋ’ ಎಂಬ ಜಯಘೋಷದೊಂದಿಗೆ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ತುಳಜಾಪುರದ ಈ ಭಕ್ತಿಭಾವದ ಸಂಭ್ರಮದ ಸಂಪೂರ್ಣ ಚಿತ್ರಣವನ್ನು ನಮ್ಮ ವರದಿಗಾರ ವಿಜಯಕುಮಾರ್ ಸಾರವಾಡ ನೇತೃತ್ವದ ತಂಡ ನಿಮ್ಮ ಮುಂದಿಡುತ್ತಿದೆ.

ಹೌದು, ನವರಾತ್ರಿ ಉತ್ಸವ ಮುಗಿದ ಬಳಿಕ ತುಳಜಾಭವಾನಿ ದೇವಿಗೆ ನೀಡಲಾಗುವ ಮಂಚಕ ನಿದ್ರೆಯ ಸಂಪ್ರದಾಯಕ್ಕೆ ಕೋಜಾಗಿರಿ ಹುಣ್ಣಿಮೆಯಂದು ತೆರೆ ಬೀಳುತ್ತದೆ. ಧಾರ್ಮಿಕ ಪರಂಪರೆಯಂತೆ ಮುಂಜಾನೆ ವಿಶೇಷ ವಿಧಿ- ವಿಧಾನಗಳೊಂದಿಗೆ ದೇವಿಯನ್ನು ಮತ್ತೆ ಮುಖ್ಯ ಸಿಂಹಾಸನದ ಮೇಲೆ ಪ್ರತಿಷ್ಠಾಪಿಸಲಾಗುತ್ತದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಾರೆ. ಸಿಂಹಾಸನಾರೋಹಣದ ಬಳಿಕ ದೇವಿಗೆ ಅಭಿಷೇಕ, ಅಲಂಕಾರ ಹಾಗೂ ಮಹಾಪೂಜೆಯಂತಹ ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಗುತ್ತದೆ. ರೇಷ್ಮೆ ವಸ್ತ್ರ, ಚಿನ್ನಾಭರಣ ಮತ್ತು ಹೂವಿನ ಅಲಂಕಾರಗಳಿಂದ ಕಂಗೊಳಿಸುವ ತಾಯಿ ಭವಾನಿಯ ದರ್ಶನ ಭಕ್ತರಲ್ಲಿ ಅಪಾರ ಭಕ್ತಿಭಾವವನ್ನು ಮೂಡಿಸುತ್ತದೆ. ದೇವಿಯ ದರ್ಶನ ಪಡೆದು ಹರಕೆ ಸಲ್ಲಿಸುವ ಭಕ್ತರು ತಮ್ಮ ಕುಟುಂಬದ ಸುಖ, ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ.

ಇನ್ನು ಕೋಜಾಗಿರಿ ಹುಣ್ಣಿಮೆಯ ಮತ್ತೊಂದು ಪ್ರಮುಖ ಆಕರ್ಷಣೆ ಸಾಂಪ್ರದಾಯಿಕ ಛಬಿನ ಉತ್ಸವ. ವಿವಿಧ ಪ್ರದೇಶಗಳಿಂದ ಆಗಮಿಸುವ ಭಕ್ತರು, ವಿಶೇಷವಾಗಿ ಸೋಲಾಪುರ ಭಾಗದ ಭಕ್ತರು ತರುವ ಸಾಂಪ್ರದಾಯಿಕ ಕೋಲುಗಳೊಂದಿಗೆ ಉತ್ಸವದ ಸಂಭ್ರಮ ಮತ್ತಷ್ಟು ಕಳೆಗಟ್ಟುತ್ತದೆ. ದೇವಸ್ಥಾನದ ಆವರಣದಲ್ಲಿ ಮೊಳಗುವ ‘ಆಯಿ ರಾಜಾ ಉದೋ ಉದೋ’ ಜಯಘೋಷ ಭಕ್ತಿಯ ವಾತಾವರಣವನ್ನು ಸೃಷ್ಟಿಸುತ್ತದೆ. ಕೋಜಾಗಿರಿ ಹುಣ್ಣಿಮೆಯ ರಾತ್ರಿ ಚಂದ್ರನ ಬೆಳಕಿನಲ್ಲಿ ಜಾಗರಣೆ, ಭಜನೆ ಹಾಗೂ ಪೂಜೆಗೆ ವಿಶೇಷ ಮಹತ್ವವಿದೆ. ಮಹಾರಾಷ್ಟ್ರ ಮಾತ್ರವಲ್ಲದೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತರು ತುಳಜಾಪುರಕ್ಕೆ ಆಗಮಿಸುತ್ತಾರೆ. ಕಾಲ್ನಡಿಗೆಯಲ್ಲೇ ದೇವಿಯ ದರ್ಶನಕ್ಕೆ ಬರುವ ಭಕ್ತರ ನಂಬಿಕೆ, ಶ್ರದ್ಧೆ ಮತ್ತು ಭಕ್ತಿಭಾವ ಈ ಉತ್ಸವದ ವೈಶಿಷ್ಟ್ಯವನ್ನು ಸಾರುತ್ತದೆ.
ಒಟ್ಟಾರೆ, ಮಂಚಕ ನಿದ್ರೆಯಿಂದ ಸಿಂಹಾಸನಾರೋಹಣ ದವರೆಗೆ… ವಿಶೇಷ ಪೂಜೆಯಿಂದ ಸಾಂಪ್ರದಾಯಿಕ ಛಬಿನಾ ಉತ್ಸವದವರೆಗೆ… ತುಳಜಾಪುರದ ಕೋಜಾಗಿರಿ ಹುಣ್ಣಿಮೆ ಭಕ್ತಿಯ ಪರಂಪರೆಯನ್ನು ಅನಾವರಣ ಗೊಳಿಸುತ್ತದೆ. ತಾಯಿ ತುಳಜಾಭವಾನಿಯ ದರ್ಶನ ಪಡೆದು ಭಕ್ತರು ಧನ್ಯತೆಯ ಭಾವದೊಂದಿಗೆ ಮರಳುತ್ತಿದ್ದಾರೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
