ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಮಸ್ಯೆಗಳನ್ನು ಆಲಿಸಿ, ಎಲ್ಲರ ಹಿತ ಕಾಪಾಡುವ ಪರಿಹಾರಕ್ಕೆ ಸೌಹಾರ್ದಯುತವಾಗಿ ಬರಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಬೆಳಗಾವಿಯ ಸುವರ್ಣಸೌಧದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಇದು ರಾಜಕಾರಣ ಮಾಡುವ ಸಭೆಯಲ್ಲ. ರೈತರು ಮತ್ತು ಕಾರ್ಖಾನೆಗಳ ಬದುಕು ಎರಡೂ ಮುಖ್ಯ. ಕಾರ್ಖಾನೆಗಳಿಲ್ಲದಿದ್ದರೆ ರೈತರಿಗೆ ತೊಂದರೆ; ರೈತರಿಲ್ಲದಿದ್ದರೆ ಕಾರ್ಖಾನೆಗಳಿಗೂ ತೊಂದರೆ. ಹೀಗಾಗಿ ಎಲ್ಲರ ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ ಎಂದರು.

ಕಳೆದ ವರ್ಷ ರೈತರ ಪ್ರತಿಭಟನೆ ವೇಳೆ ವಾಹನಕ್ಕೆ ಬೆಂಕಿ ಹಚ್ಚಿದಂತಹ ಘಟನೆಗಳು ಮರುಕಳಿಸಬಾರದು. ರಾಜ್ಯದಲ್ಲಿ ಶಾಂತಿ ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದ್ದು, ಆರೋಪ–ಪ್ರತ್ಯಾರೋಪಗಳಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಅವರು, ರೈತರೊಂದಿಗೆ ಚರ್ಚಿಸಿ, ಅವರ ಬಗ್ಗೆ ಹೃದಯವಂತಿಕೆ ತೋರಿಸಿ, ಒಟ್ಟಾಗಿ ತೀರ್ಮಾನಕ್ಕೆ ಬರಬೇಕು ಎಂದು ಕಾರ್ಖಾನೆ ಮಾಲೀಕರಿಗೆ ಮನವಿ ಮಾಡಿದರು.
ಕಾರ್ಖಾನೆ ಮಾಲೀಕರು ರೈತರ ವಿಶ್ವಾಸ ಗಳಿಸಬೇಕು. ರೈತರ ಆಕ್ರೋಶಕ್ಕೆ ಅವಕಾಶ ನೀಡಬಾರದು. ರೈತರನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ಕಾರ್ಖಾನೆಗಳು ಸಫಲವಾಗಿಲ್ಲ. ನಿಮಗೆ ಹೊರೆ ಎನಿಸಿದರೂ ಪರಿಹಾರಕ್ಕೆ ಬರಲು ತೀರ್ಮಾನ ಕೈಗೊಳ್ಳಿ ಎಂದು ಶಿವಕುಮಾರ್ ಹೇಳಿದರು.
ಕಳೆದ ಹತ್ತು ವರ್ಷಗಳಿಂದ ಸಕ್ಕರೆ ಬೆಲೆ ಏರಿಕೆಯಾಗದಿರುವುದರಿಂದ ರೈತರ ನಷ್ಟ ಹೆಚ್ಚಾಗಿದೆ. ಕಬ್ಬಿನ ಇಳುವರಿಯೂ ಕುಸಿದಿದೆ. ಪ್ರತಿ ಟನ್ ಕಬ್ಬಿಗೆ 6,000ರವರೆಗೆ ಬೆಲೆ ನಿಗದಿಪಡಿಸಿ ಪರಿಹಾರ ನೀಡಬೇಕೆಂದು ರೈತರು ಬೇಡಿಕೆ ಇಟ್ಟಿದ್ದಾರೆ. ಈ ಸಮಸ್ಯೆಗೆ ಕಾರ್ಖಾನೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರೈತರ ಬೇಡಿಕೆಗೆ ಸ್ಪಂದಿಸಿ, ಪರಿಹಾರದ ಒಂದು ಭಾಗವನ್ನು ಸರ್ಕಾರ ಹಾಗೂ ಉಳಿದ ಮೊತ್ತವನ್ನು ಸಕ್ಕರೆ ಕಾರ್ಖಾನೆಗಳು ನೀಡುವ ತೀರ್ಮಾನ ಕೈಗೊಂಡಿತ್ತು. ಸುಮಾರು ಶೇ.80ರಷ್ಟು ಕಾರ್ಖಾನೆಗಳು ಅದನ್ನು ಪಾಲಿಸಿದ್ದು, ಕೆಲವು ಕಾರ್ಖಾನೆಗಳು ಪಾಲಿಸದೆ ನ್ಯಾಯಾಲಯದ ಮೊರೆ ಹೋಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದರು.
ಕಾರ್ಖಾನೆ ಮಾಲೀಕರಿಗೆ ಹಣಕಾಸು, ಬ್ಯಾಂಕ್ ಸಾಲ, ಎಥನಾಲ್, ಮೊಲಾಸಿಸ್ ಮತ್ತು ವಿದ್ಯುತ್ ದರ ಸೇರಿದಂತೆ ಹಲವು ಸಮಸ್ಯೆಗಳಿವೆ. ಹೀಗಾಗಿ ಎಲ್ಲರೊಂದಿಗೆ ಚರ್ಚಿಸದೆ ಒಬ್ಬರೇ ತೀರ್ಮಾನಿಸಲು ಸಾಧ್ಯವಿಲ್ಲ ಎಂದು ರೈತರಿಗೆ ಸಮಯ ಕೇಳಿದ್ದೆ. ಇದೀಗ ಇಡೀ ಸರ್ಕಾರವೇ ಸಭೆಯಲ್ಲಿ ಭಾಗವಹಿಸಿದೆ ಎಂದು ಹೇಳಿದರು.
ಎಥನಾಲ್ ಮತ್ತು ಮೊಲಾಸಿಸ್ ವಿಚಾರ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕರ್ನಾಟಕದವರೇ ಕೇಂದ್ರ ಸಚಿವರಾಗಿರುವುದರಿಂದ ರಾಜ್ಯದ ಪರಿಸ್ಥಿತಿಯನ್ನು ಅವರ ಗಮನಕ್ಕೆ ತಂದು ಒತ್ತಡ ಹೇರಬೇಕು. ಕೇಂದ್ರ ಸರ್ಕಾರ ರಚಿಸಿರುವ ಸಮಿತಿಯ ಪ್ರಗತಿ ಕುರಿತು ಸಂಸದರು ಮಾಹಿತಿ ನೀಡಿದ್ದಾರೆ. ಈ ಸಮಸ್ಯೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ; ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಬಿಹಾರ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲೂ ಇದೆ ಎಂದು ಶಿವಕುಮಾರ್ ಹೇಳಿದರು.

ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡಲು ಸರ್ಕಾರ ವರ್ಷಕ್ಕೆ ಸುಮಾರು ₹20 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದು, ಈ ವರ್ಷ ಅದು ₹32 ಸಾವಿರ ಕೋಟಿಗೆ ಏರಬಹುದು. ಮಳೆ ಕೊರತೆಯಿಂದ ರೈತರು ಹೆಚ್ಚು ವಿದ್ಯುತ್ ಬಳಸುತ್ತಿದ್ದಾರೆ ಎಂದ ಅವರು, “ನಾವು ಯಾರ ಪರವೂ ಇಲ್ಲ. ರೈತರಿಗೂ, ಕಾರ್ಖಾನೆಗಳಿಗೂ ನ್ಯಾಯ ಒದಗಿಸುವುದೇ ನಮ್ಮ ಉದ್ದೇಶ,” ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಯೊಂದಿಗೂ ಈ ವಿಚಾರವಾಗಿ ಚರ್ಚಿಸಿರುವುದಾಗಿ ತಿಳಿಸಿದ ಅವರು, ಸಕ್ಕರೆ ಉತ್ಪಾದನೆ ಕುಸಿತ ಸೇರಿದಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಅಂಶಗಳನ್ನೂ ಪರಿಗಣಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಈ ವೇಳೆ ಸಚಿವ ಸತೀಶ್ ಜಾರಕಿಹೊಳಿ, ಲಕ್ಷ್ಮಣ್ ಸವದಿ, ಚಲುವರಾಯಸ್ವಾಮಿ, ಎಂ ಬಿ ಪಾಟೀಲ್, ಸಂತೋಷ್ ಲಾಡ್, ರುದ್ರಪ್ಪ ಲಮಾಣಿ, ಎಸ್ ಎಸ್ ಮಲ್ಲಿಕಾರ್ಜುನ್, ವಿಜಯಾನಂದ್ ಕಾಶಪ್ಪನವರ್, ಸಿಎಂ ಆರ್ಥಿಕ ಸಲಹೆಗಾರ ಎಲ್ ಕೆ ಅತೀಕ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್, ಗೌರವ್ ಗುಪ್ತಾ, ರಿತೇಶ್ ಕುಮಾರ್ ಸಿಂಗ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಪ್ರಭಾಕರ್ ಕೋರೆ, ಮುರುಗೇಶ ನಿರಾಣಿ, ಕಬ್ಬು ಬೆಳೆಯುವ ಜಿಲ್ಲೆಗಳ ಜನಪ್ರತಿನಿಧಿಗಳು, ಕಾರ್ಖಾನೆಗಳ ಮಾಲೀಕರು, ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
