Belagavi

ಸುವರ್ಣಸೌಧದಲ್ಲಿ ಸಭೆಗೂ ಮುನ್ನವೇ ರೈತರ ರಾದ್ಧಾಂತ: ಎರಡು ಬಣಗಳ ನಡುವೆ ತೀವ್ರ ಘರ್ಷಣೆ!

Share

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ಮಹತ್ವದ ಸಭೆ ಆರಂಭವಾಗುವ ಮುನ್ನವೇ ರೈತ ಬಣಗಳ ನಡುವೆ ಭಾರಿ ಗದ್ದಲ ಉಂಟಾಗಿ ಕೋಲಾಹಲ ಸೃಷ್ಟಿಯಾಗಿದೆ. ಸಭಾಂಗಣದಲ್ಲೇ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಿಂದಾಗಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳು ಹಾಗೂ ಬೆಲೆ ನಿಗದಿಗೆ ಸಂಬಂಧಿಸಿದಂತೆ ಬೆಳಗಾವಿಯ ಸುವರ್ಣಸೌಧದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಹೈ-ವೋಲ್ಟೇಜ್ ಸಭೆ ಕರೆಯಲಾಗಿತ್ತು. ಆದರೆ, ಸಭೆ ಔಪಚಾರಿಕವಾಗಿ ಪ್ರಾರಂಭವಾಗುವ ಮೊದಲೇ ಎರಡು ವಿಭಿನ್ನ ರೈತ ಬಣಗಳ ಮುಖಂಡರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಈ ದಿಢೀರ್ ಬೆಳವಣಿಗೆಯಿಂದಾಗಿ ಸುವರ್ಣಸೌಧದ ಸಭಾಂಗಣದಲ್ಲಿದ್ದ ಅಧಿಕಾರಿಗಳು ಹಾಗೂ ಗಣ್ಯರು ಕೆಲ ಕಾಲ ಆತಂಕಕ್ಕೊಳಗಾದರು.ಪರಿಸ್ಥಿತಿ ಕೈಮೀರುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, ಗಲಾಟೆಯಲ್ಲಿ ನಿರತರಾಗಿದ್ದ ಇಬ್ಬರು ರೈತ ಮುಖಂಡರನ್ನು ಬಲವಂತವಾಗಿ ಸಭಾಂಗಣದಿಂದ ಹೊರಗೆ ಎಳೆದುಕೊಂಡು ಹೋದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕಮ್ ಹಾಗೂ ಡಿಸಿಪಿ ನಾರಾಯಣ ಬರಮನಿ ಅವರು ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡು ಗೊಂದಲವನ್ನು ಶಾಂತಗೊಳಿಸಿದರು. ಸದ್ಯ ಸುವರ್ಣಸೌಧದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Tags:

error: Content is protected !!