ಐತಿಹಾಸಿಕ ಕಿತ್ತೂರು ಉತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲು ಜಲ ಸಾಹಸ ಕ್ರೀಡೆಗಳು ಹಾಗೂ ದೋಣಿ ವಿಹಾರಕ್ಕೆ ಗಣ್ಯರು ಚಾಲನೆ ನೀಡಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಬೈಲಹೊಂಗಲ ಕ್ಷೇತ್ರದ ಶಾಸಕ ಮಹಾಂತೇಶ ಕೌಜಲಗಿ ಹಾಗೂ ಕಿತ್ತೂರು ಕ್ಷೇತ್ರದ ಶಾಸಕ ಬಾಬಾಸಾಹೇಬ ಪಾಟೀಲ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಜಲ ಸಾಹಸ ಕ್ರೀಡೆಗಳು ಮತ್ತು ದೋಣಿ ವಿಹಾರವನ್ನು ಉದ್ಘಾಟಿಸಿದರು. ಅಷ್ಟೇ ಅಲ್ಲದೆ, ಕಿತ್ತೂರಿನ ಐತಿಹಾಸಿಕ ಕೆರೆಯಲ್ಲಿ ದೋಣಿ ವಿಹಾರವನ್ನೂ ನಡೆಸಿದರು.

ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಚನ್ನರಾಜ ಹಟ್ಟಿಹೊಳಿ ಅವರು, ಕಿತ್ತೂರು ಉತ್ಸವದ ಅಂಗವಾಗಿ ಎಲ್ಲರೂ ಒಗ್ಗೂಡಿ ಜಲ ಕ್ರೀಡೆಗಳು ಹಾಗೂ ದೋಣಿ ವಿಹಾರಕ್ಕೆ ಚಾಲನೆ ನೀಡಿರುವುದಾಗಿ ತಿಳಿಸಿದರು.
ಶಾಸಕ ಬಾಬಾಸಾಹೇಬ ಪಾಟೀಲ್ ಅವರು
“ಕಿತ್ತೂರು ಉತ್ಸವಕ್ಕೆ ಪ್ರತಿವರ್ಷದಂತೆ ಈ ಬಾರಿಯೂ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಸಂಜೆ ವೇಳೆಗೆ ಸಚಿವರು ಆಗಮಿಸಲಿದ್ದು, ಮುಖ್ಯಮಂತ್ರಿಗಳೂ ಕಿತ್ತೂರು ಉತ್ಸವಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಮಾರಾಟ ಮಳಿಗೆಗಳು, ದೋಣಿ ವಿಹಾರ, ಜಾನುವಾರು ಸಂತೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ.
ಕಿತ್ತೂರು ಪ್ರಾಧಿಕಾರ ಹಾಗೂ ಕಿತ್ತೂರು ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ ಅನುದಾನ ಬರುತ್ತಿದ್ದು, ಇನ್ನೂ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ” ಎಂದು ತಿಳಿಸಿದರು.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮನ ಸ್ಮಾರಕವು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ.

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ವತಿಯಿಂದ ಮಾಡಬೇಕಾದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅಗತ್ಯ ದಾಖಲೆಗಳನ್ನು ಸಲ್ಲಿಸಲಾಗಿದೆ.
ಇದೀಗ ಕೇಂದ್ರ ಸರ್ಕಾರ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಜಗದೀಶ್ ಶೆಟ್ಟರ್ ಹಾಗೂ ಪ್ರಹ್ಲಾದ್ ಜೋಶಿ ಅವರು ಚೆನ್ನಮ್ಮಾಜಿಯವರ ವಿಚಾರದತ್ತ ಗಮನಹರಿಸಬೇಕು.
ಈ ಭಾಗದ ಸಂಸದರು ಹಾಗೂ ಸಂಬಂಧಪಟ್ಟ ಕೇಂದ್ರ ನಾಯಕರನ್ನು ಭೇಟಿಯಾಗಿ ಚರ್ಚಿಸಲಾಗುವುದು.
ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಿ ರಾಣಿ ಚೆನ್ನಮ್ಮನ ಸ್ಮಾರಕವನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಪ್ರಯತ್ನಿಸಬೇಕು.
ಉತ್ತರ ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಗುವಷ್ಟು ಪ್ರಾಮುಖ್ಯತೆ ನಮ್ಮ ಭಾಗದ ಸ್ವಾತಂತ್ರ್ಯ ಹೋರಾಟಗಾರರಿಗೆ, ವಿಶೇಷವಾಗಿ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮನವರಿಗೆ ಸಿಗಬೇಕು.
ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಸೂಕ್ತ ಗೌರವ ದೊರೆತರೆ ಅದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಲಿದೆ” ಎಂದು ಹೇಳಿದರು.
