ಮುಂಬರುವ ಉತ್ಸವವನ್ನು ಅತ್ಯಂತ ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆಗಳು ಬಿರುಸುಗೊಂಡಿದ್ದು, ಈ ಬಾರಿ ಹೊಸದಾಗಿ ಜಾನುವಾರು ಜಾತ್ರೆಯನ್ನು ಪರಿಚಯಿಸಲಾಗಿದೆ. ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ್ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಉತ್ಸವದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗಿದ್ದು, ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿಗಳು ಆಗಮಿಸಲಿದ್ದಾರೆ.

ಕಿತ್ತೂರು ಉತ್ಸವದ ಸಿದ್ಧತೆಗೆ ಸಂಬಂಧಿಸಿದಂತೆ ನಡೆದ ಮೂರನೇ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶಾಸಕ ಬಾಬಾಸಾಹೇಬ್ ಪಾಟೀಲ್, ಪ್ರತಿವರ್ಷದಂತೆ ಈ ವರ್ಷವೂ ಮೂರು ದಿನಗಳ ಕಾಲ ಅಂದರೆ 23, 24 ಮತ್ತು 25 ರಂದು ಉತ್ಸವ ಅತ್ಯಂತ ವೈಭವದಿಂದ ಜರುಗಲಿದೆ ಎಂದರು. ಮೊದಲ ದಿನ ಜ್ಯೋತಿ ಆಗಮನದೊಂದಿಗೆ ಅಧಿಕೃತ ಚಾಲನೆ ದೊರೆಯಲಿದ್ದು, ಕೊನೆಯ ದಿನದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಸಂಜೆ ವೇಳೆ ಭಾಗವಹಿಸಲಿದ್ದಾರೆ. ಚೆನ್ನಮ್ಮನ ನಾಡಿನ ಇತಿಹಾಸವನ್ನು ರಾಜ್ಯ ಹಾಗೂ ದೇಶಾದ್ಯಂತ ವ್ಯಾಪಕವಾಗಿ ಬಿಂಬಿಸಲು ಈಗಿನಿಂದಲೇ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದರು.

ಈ ಬಾರಿಯ ಉತ್ಸವದಲ್ಲಿ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿಶೇಷ ಫಲ-ಪುಷ್ಪ ಪ್ರದರ್ಶನದೊಂದಿಗೆ ಜನವರಿ ತಿಂಗಳ ಜಾನುವಾರು ಜಾತ್ರೆಯನ್ನು ಹೊಸದಾಗಿ ಸೇರಿಸಲಾಗಿದೆ. ಹೈನುಗಾರಿಕೆ ಮತ್ತು ಸ್ಥಳೀಯ ಜಾನುವಾರು ತಳಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಥಳೀಯ ಹಾಗೂ ಹೈಬ್ರಿಡ್ ತಳಿಗಳ ಪ್ರತ್ಯೇಕ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಹರಿಯಾಣ ಸೇರಿದಂತೆ ಹೊರರಾಜ್ಯಗಳಿಂದಲೂ ಪ್ರಸಿದ್ಧ ತಳಿಯ ಎಮ್ಮೆ ಹಾಗೂ ಜಾನುವಾರುಗಳನ್ನು ತರಲು ವ್ಯವಸ್ಥೆ ಮಾಡಲಾಗಿದ್ದು, ಸಾಕಾಣಿಕೆದಾರರಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದರು.
ಕಳೆದ ಬಾರಿಯ ಉತ್ಸವದಲ್ಲಿ ನಡೆದ ನ್ಯೂನತೆಗಳನ್ನು ಸರಿಪಡಿಸಿಕೊಂಡು, ಈ ಬಾರಿ ಮತ್ತಷ್ಟು ವ್ಯವಸ್ಥಿತವಾಗಿ ಹಾಗೂ ಅದ್ದೂರಿಯಾಗಿ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಗಿದೆ. ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಎಲ್ಲರೂ ಕೈಜೋಡಿಸಿ ಯಶಸ್ವಿಗೊಳಿಸಲು ಮನವಿ ಮಾಡಲಾಗಿದೆ. ಹೊಸ ಆಕರ್ಷಣೆಗಳೊಂದಿಗೆ ನಡೆಯುತ್ತಿರುವ ಈ ವಿನೂತನ ಉತ್ಸವವು ಜನಸಾಮಾನ್ಯರಿಗೆ ಉತ್ತಮ ಮನರಂಜನೆ ನೀಡುವ ಜೊತೆಗೆ ಗ್ರಾಮೀಣ ಸಂಸ್ಕೃತಿಗೆ ದೊಡ್ಡ ಮಟ್ಟದ ವೇದಿಕೆ ಕಲ್ಪಿಸಲಿದೆ ಎಂದರು.
