ಕಿತ್ತೂರು ರಾಣಿ ಚೆನ್ನಮ್ಮನ 202ನೇ ವಿಜಯೋತ್ಸವದ ಹಿನ್ನೆಲೆಯಲ್ಲಿ ನಾಡಿನಾದ್ಯಂತ ಸಂಭ್ರಮ ಸಾಗರವೇ ಹರಿದುಬಂದಿದೆ. ಇದರ ಅಂಗವಾಗಿ ಕಿತ್ತೂರಿನಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಮಹಿಳಾ ಬೈಕ್ ರ್ಯಾಲಿ ಸಾರ್ವಜನಿಕರ ಕಣ್ಮನ ಸೆಳೆಯಿತು.

ಚಾರಿತ್ರಿಕ ಕಿತ್ತೂರು ಉತ್ಸವದ ಹಿನ್ನೆಲೆಯಲ್ಲಿ ವೀರರಾಣಿ ಚೆನ್ನಮ್ಮನಿಗೆ ಗೌರವ ನಮನ ಸಲ್ಲಿಸಲು ಮಹಿಳೆಯರೆಲ್ಲರೂ ಸೇರಿ ವಿಶಿಷ್ಟ ಹಾಗೂ ರೋಚಕ ಮಹಿಳಾ ಬೈಕ್ ರ್ಯಾಲಿಯನ್ನು ಹಮ್ಮಿಕೊಂಡಿದ್ದರು. ಹೂಲಿಕಟ್ಟಿ ಕ್ರಾಸ್ನ ಮುರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಆರಂಭಗೊಂಡ ಈ ರ್ಯಾಲಿಗೆ ಅದ್ದೂರಿ ಚಾಲನೆ ದೊರೆಯಿತು. ಶಾಸಕ ಬಾಬಾಸಾಹೇಬ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಕಳೆದ ಮೂರು ವರ್ಷಗಳಿಂದ ಈ ಉತ್ಸವವು ಅತ್ಯಂತ ಉತ್ಸಾಹ ಹಾಗೂ ವೈಭವದಿಂದ ಆಚರಿಸಲ್ಪಡುತ್ತಿದ್ದು, ಈ ಬಾರಿಯೂ ತಾಯಿಯ ಸ್ವಾಭಿಮಾನದ ಹೋರಾಟವನ್ನು ಸ್ಮರಿಸುವ ನಿಟ್ಟಿನಲ್ಲಿ ಮಹಿಳೆಯರು ಬೈಕ್ ರ್ಯಾಲಿಯ ಮೂಲಕ ನಾಡಿನ ಗಮನ ಸೆಳೆದರು.
ಈ ವಿಶಿಷ್ಟ ರ್ಯಾಲಿಯಲ್ಲಿ ಭಾಗವಹಿಸಿದ್ದ ನೂರಾರು ಮಹಿಳೆಯರು ಕಿತ್ತೂರು ರಾಣಿ ಚೆನ್ನಮ್ಮನ ಐತಿಹಾಸಿಕ ವೇಷಭೂಷಣಗಳನ್ನು ಧರಿಸಿ ಸಾಹಸ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಹೂಲಿಕಟ್ಟಿ ಕ್ರಾಸಿನಿಂದ ಹೊರಟ ಬೈಕ್ ರ್ಯಾಲಿಯು ರಾಣಿ ಚೆನ್ನಮ್ಮ ವೃತ್ತವನ್ನು ತಲುಪಿದಾಗ, ಅಲ್ಲಿರುವ ಚೆನ್ನಮ್ಮನ ಭವ್ಯ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ನಂತರ ಶ್ರೀ ದುರ್ಗಮ್ಮನ ದೇವಾಲಯದಲ್ಲಿ ನಾಡಿನ ಒಳಿತಿಗಾಗಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು.
ರಾಣಿ ಚೆನ್ನಮ್ಮ ವೃತ್ತದಿಂದ ಮುಂದುವರಿದ ಬೈಕ್ ರ್ಯಾಲಿಯು ಐತಿಹಾಸಿಕ ಅರಳಿಕಟ್ಟೆಯ ಮೂಲಕ ಸಾಗಿ ಅಂತಿಮವಾಗಿ ಕಿತ್ತೂರು ಚೆನ್ನಮ್ಮನ ಕೋಟೆಯ ಆವರಣವನ್ನು ತಲುಪಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಈ ಬಾರಿಯ ಉತ್ಸವವನ್ನು ರಾಜ್ಯಾದ್ಯಂತ ಅತ್ಯಂತ ವೈಭವದಿಂದ ಮತ್ತು ಯಶಸ್ವಿಯಾಗಿ ಆಚರಿಸಲು ಸಾರ್ವಜನಿಕರು ಹಾಗೂ ತಾಯಂದಿರು ಸಂಪೂರ್ಣ ಸಹಕಾರ ನೀಡಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ. ರಸ್ತೆಯುದ್ದಕ್ಕೂ ನೆರೆದಿದ್ದ ಜನಸ್ತೋಮ ಮಹಿಳಾ ಬೈಕರ್ಸ್ಗೆ ಜಯಘೋಷಗಳೊಂದಿಗೆ ಸಾಥ್ ನೀಡಿದರು.
