ಪೆಟ್ರೋಲ್ ಬಂಕ್ನಲ್ಲಿ ಕಾರೊಂದು ರಿವರ್ಸ್ ಬಂದು ಬೈಕ್ಗೆ ಹಾಗೂ ಡೀಸೆಲ್ ಡಿಸ್ಪೆನ್ಸರ್ ಯಂತ್ರಕ್ಕೆ ರಭಸವಾಗಿ ಅಪ್ಪಳಿಸಿದ ಭೀಕರ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ನಡೆದಿದೆ. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಳಕಲ್ ನಗರದ ಬಳಿಯ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಮುಂದೆ ಹೋಗುತ್ತಿದ್ದ ವಾಹನಗಳ ನಡುವೆ ಈ ಅಪಘಾತ ಸಂಭವಿಸಿದೆ. ಪೆಟ್ರೋಲ್ ಹಾಕಿಸಿಕೊಂಡು ಹೋಗುತ್ತಿದ್ದ ಕಾರ್ ಒಂದನ್ನು ವೇಗವಾಗಿ ರಿವರ್ಸ್ ತೆಗೆದುಕೊಂಡಿದ್ದೇ ಈ ದುರ್ಘಟನೆಗೆ ಕಾರಣವಾಗಿದ್ದು, ನೇರವಾಗಿ ಬೈಕ್ಗೆ ಗುದ್ದಿದ ಕಾರ್ ನಂತರ ರಭಸದಿಂದ ಡೀಸೆಲ್ ಡಿಸ್ಪೆನ್ಸರ್ ಯಂತ್ರಕ್ಕೆ ಅಪ್ಪಳಿಸಿದೆ. ಈ ಅಪಘಾತದ ರಭಸಕ್ಕೆ ಬೈಕ್ನಲ್ಲಿದ್ದ ಇಬ್ಬರ ಪೈಕಿ ಓರ್ವರಿಗೆ ತಲೆಗೆ ಗಂಭೀರ ಗಾಯವಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೆಟ್ರೋಲ್ ಬಂಕ್ನಲ್ಲಿ ಈ ಅವಘಡ ಸಂಭವಿಸುತ್ತಿದ್ದಂತೆ ಕೂಡಲೇ ಎಚ್ಚೆತ್ತ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪೆಟ್ರೋಲ್ ಬಂಕ್ ಹಾಗೂ ಯಂತ್ರಗಳ ಮೇಲೆ ನೀರು ಸಿಂಪಡಿಸುವ ಮೂಲಕ ಬೆಂಕಿ ಹೊತ್ತಿಕೊಳ್ಳದಂತೆ ಮುನ್ನೆಚ್ಚರಿಕೆ ವಹಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಈ ಸಂಪೂರ್ಣ ಅಪಘಾತದ ದೃಶ್ಯವು ಬಂಕ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
