ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ. ಸಾಂಸ್ಕೃತಿಕ ಕಾಲೋನಿಯ ಮನೆಯೊಂದರ ಬೀಗ ಒಡೆದು ಒಳನುಗ್ಗಿದ ದುಷ್ಕರ್ಮಿಗಳು, ಮನೆಯಲ್ಲಿದ್ದ ಬಂಗಾರ, ಬೆಳ್ಳಿ ವಸ್ತುಗಳು ಹಾಗೂ ಸಾವಿರಾರು ರೂಪಾಯಿ ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಸಾಂಸ್ಕೃತಿಕ ಕಾಲನಿಯಲ್ಲಿ ಕಳ್ಳರು ಮತ್ತೆ ತಮ್ಮ ಕೈಚಳಕ ತೋರಿಸಿದ್ದಾರೆ. ಇಲ್ಲಿನ ನಿವಾಸಿ ಲಕ್ಷ್ಮಣ ಫಕೀರಪ್ಪ ಪಾಗದ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಕೃತ್ಯ ಎಸಗಿರುವ ದುಷ್ಕರ್ಮಿಗಳು, ಮನೆಯ ಬೀಗ ಒಡೆದು ಒಳನುಗ್ಗಿ ಬಂಗಾರದ ಆಭರಣಗಳು, ಬೆಳ್ಳಿ ವಸ್ತುಗಳು ಹಾಗೂ 40 ಸಾವಿರ ರೂಪಾಯಿ ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಇಳಕಲ್ ಶಹರ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ. ಇತ್ತೀಚೆಗೆ ಇಳಕಲ್ನಲ್ಲಿ ಸಾಲು ಸಾಲು ಮನೆಗಳ್ಳತನಗಳು ವರದಿಯಾಗುತ್ತಿದ್ದು, ಪೊಲೀಸರು ರಾತ್ರಿ ಗಸ್ತು ಬಿಗಿಗೊಳಿಸಿ ತಕ್ಷಣವೇ ಕಳ್ಳರನ್ನು ಬಂಧಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

