Belagavi

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಮುತಗಾ ಗ್ರಾಮದ ಸ್ವಾತಿಕ್ ಪಾಟೀಲ್‌ಗೆ ಕಂಚಿನ ಪದಕ: ಲಕ್ಷ್ಮೀ ಹೆಬ್ಬಾಳಕರ್ ಅಭಿನಂದನೆ

Share

ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಎತ್ತಿಹಿಡಿದು, ಪುರುಷರ 100 ಮೀಟರ್ ಬ್ರೆಸ್ಟ್‌ಸ್ಟ್ರೋಕ್ SB9 ಈಜು ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿರುವ ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ಸ್ವಾತಿಕ್ ಪಾಟೀಲ್ ಅವರಿಗೆ ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅಭಿನಂದನೆ ಸಲ್ಲಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅದ್ಭುತ ಪ್ರದರ್ಶನ ನೀಡಿ ಪದಕ ಗೆಲ್ಲುವ ಮೂಲಕ ಸ್ವಾತಿಕ್ ಪಾಟೀಲ್ ಅವರು ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅವರ ಈ ಸಾಧನೆಯು ಮುತಗಾ ಗ್ರಾಮ ಮಾತ್ರವಲ್ಲದೆ, ಇಡೀ ಬೆಳಗಾವಿ ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹರ್ಷ ವ್ಯಕ್ತಪಡಿಸಿದ್ದಾರೆ.

ದೇಶದ ರಕ್ಷಣಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಮಾಜಿ ಸೈನಿಕ ನಾರಾಯಣ ಹಾಗೂ ಚಾಂಗುಣಾ ದಂಪತಿಯ ಪುತ್ರನಾಗಿರುವ ಸ್ವಾತಿಕ್, ತಮ್ಮ ದೃಢಸಂಕಲ್ಪ, ಅವಿರತ ಪರಿಶ್ರಮ ಮತ್ತು ಸಾಧಿಸುವ ಛಲದ ಮೂಲಕ ಅಂತಾರಾಷ್ಟ್ರೀಯ ಕ್ರೀಡಾ ವೇದಿಕೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಪಾಲಕರ ತ್ಯಾಗ, ಪ್ರೋತ್ಸಾಹ ಹಾಗೂ ಸ್ವಾತಿಕ್ ಅವರ ಕಠಿಣ ಪರಿಶ್ರಮ ಈ ಯಶಸ್ಸಿನ ಹಿಂದೆ ಮಹತ್ವದ ಪಾತ್ರ ವಹಿಸಿವೆ.
ಅಂಗವೈಕಲ್ಯವನ್ನು ಮೆಟ್ಟಿ ನಿಂತು ಆತ್ಮವಿಶ್ವಾಸ ಹಾಗೂ ಅಚಲ ಸಂಕಲ್ಪದಿಂದ ಸ್ವಾತಿಕ್ ಸಾಧಿಸಿರುವ ಈ ಗೆಲುವು ಕ್ರೀಡಾ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಿದೆ. ಸವಾಲುಗಳನ್ನು ಮೆಟ್ಟಿ ನಿಂತು ಗುರಿ ಸಾಧಿಸಬಹುದು ಎಂಬುದಕ್ಕೆ ಅವರ ಸಾಧನೆ ಪ್ರೇರಣಾದಾಯಕ ಉದಾಹರಣೆಯಾಗಿದೆ. ಅವರ ಈ ಸ್ಫೂರ್ತಿದಾಯಕ ಪಯಣ ಕೋಟ್ಯಂತರ ಯುವಜನರಿಗೆ, ವಿಶೇಷವಾಗಿ ಕ್ರೀಡಾಸಕ್ತರಿಗೆ, ಪ್ರೇರಣೆಯಾಗಲಿ ಎಂದು ಅವರು ಆಶಿಸಿದ್ದಾರೆ.
ಮುಂದಿನ ದಿನಗಳಲ್ಲಿಯೂ ಸ್ವಾತಿಕ್ ಪಾಟೀಲ್ ಅವರು ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಿ, ದೇಶಕ್ಕಾಗಿ ಚಿನ್ನದ ಪದಕಗಳನ್ನು ಗೆದ್ದು ಭಾರತದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಶುಭ ಹಾರೈಸಿದ್ದಾರೆ

Tags:

error: Content is protected !!