Belagavi

ಬೆಳಗಾವಿ ಮಹಾನಗರ ಪಾಲಿಕೆಯಿಂದ ಪೌರಕಾರ್ಮಿಕರ ದಿನಾಚರಣೆ: ಸ್ವಚ್ಛತಾ ಸೈನಿಕರಿಗೆ ಕ್ರೀಡಾಕೂಟದ ಸಂಭ್ರಮ

Share

ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ಪೌರಕಾರ್ಮಿಕರ ದಿನಾಚರಣೆ ಹಾಗೂ ಅವರ ಮನರಂಜನೆಗಾಗಿ ವಿಶೇಷ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದ ಗಣ್ಯರು, ನಗರದ ನೈರ್ಮಲ್ಯಕ್ಕಾಗಿ ನಿರಂತರವಾಗಿ ಶ್ರಮಿಸುವ ಪೌರಕಾರ್ಮಿಕರ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಬೆಳಗಾವಿ ಮಹಾನಗರ ಪಾಲಿಕೆ ಆವರಣದಲ್ಲಿ ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕ್ರೀಡಾಕೂಟವನ್ನು ಮೇಯರ್ ಪ್ರೀತಿ ಕಾಮಕರ್ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಮೇಯರ್, ನಗರದ ನೈರ್ಮಲ್ಯ ಮತ್ತು ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಪ್ರತಿದಿನ ನಗರವನ್ನು ಸ್ವಚ್ಛವಾಗಿಡುವ ಅವರನ್ನು ನಾವು “ಸ್ವಚ್ಛತಾ ಸೈನಿಕರು” ಎಂದು ಗೌರವಿಸಬೇಕಾಗಿದೆ ಎಂದರು.

ಉಪಮೇಯರ್ ಹನುಮಂತ ಕೊಂಗಾಲಿ ಮಾತನಾಡಿ, ಸೆಪ್ಟೆಂಬರ್ 23 ರಂದು ಕಾರ್ಯಕ್ರಮ ಆಯೋಜಿಸಬೇಕಿತ್ತಾದರೂ, ಕೆಲವು ಕಾರಣಗಳಿಂದ ಮುಂದೂಡಲ್ಪಟ್ಟಿತ್ತು. ದಿನನಿತ್ಯದ ಕೆಲಸದ ಒತ್ತಡದಿಂದ ಪೌರಕಾರ್ಮಿಕರಿಗೆ ಸ್ವಲ್ಪ ವಿರಾಮ ನೀಡಿ, ಅವರಲ್ಲಿ ಉತ್ಸಾಹ ಹಾಗೂ ಮನರಂಜನೆ ತುಂಬಲು ಈ ಕ್ರೀಡಾಕೂಟ ಆಯೋಜಿಸಲಾಗಿದೆ; ಇಲ್ಲಿ ಗೆಲುವು-ಸೋಲಿಗಿಂತ ಭಾಗವಹಿಸುವಿಕೆಯೇ ಮುಖ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತರಾದ ಕಾರ್ತಿಕ್ ಎಂ. ಅವರು, ಬೆಳಗಾವಿ ನಗರದ ಸೌಂದರೀಕರಣ ಮತ್ತು ಸಾರ್ವಜನಿಕ ಆರೋಗ್ಯಕ್ಕಾಗಿ ಪೌರಕಾರ್ಮಿಕರು ಯಾವುದೇ ನಿರ್ದೇಶನದ ನಿರೀಕ್ಷೆಯಿಲ್ಲದೆ ಬೆಳಗಿನಿಂದಲೇ ಶ್ರಮಿಸುತ್ತಾರೆ. ಅವರಲ್ಲಿರುವ ಅಡಗಿರುವ ಕ್ರೀಡಾ ಪ್ರತಿಭೆಯನ್ನು ಅನಾವರಣಗೊಳಿಸಲು ಹಾಗೂ ಹೊಸ ಉತ್ಸಾಹ ತುಂಬಲು ಈ ವೇದಿಕೆ ಕಲ್ಪಿಸಲಾಗಿದೆ ಎಂದರು.
ಪೌರಕಾರ್ಮಿಕರು ಅತ್ಯಂತ ಆನಂದದಿಂದ ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು.

Tags:

error: Content is protected !!