ಖಾನಾಪುರ ತಾಲೂಕಿನ ಮೋರಬ ವ್ಯಾಪ್ತಿಯ ಗವಳಿವಾಡ ಗ್ರಾಮವನ್ನು ಬೆಳಗಾವಿಯ ವೇದಾಂತ ಫೌಂಡೇಶನ್ ದತ್ತು ಪಡೆದುಕೊಂಡಿದ್ದು, ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಯೋಜನೆಯ ಉದ್ಘಾಟನೆ ಬುಧವಾರ ಅದ್ಧೂರಿಯಾಗಿ ನೆರವೇರಿತು. ಗ್ರಾಮದ ಶೈಕ್ಷಣಿಕ, ಸಾಮಾಜಿಕ ಹಾಗೂ ಮೂಲಸೌಕರ್ಯಗಳ ಕಾಯಕಲ್ಪಕ್ಕಾಗಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಮುಖ ಗಣ್ಯರು ಹಾಗೂ ದಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.

ದೈನಿಕ ‘ಸಕಾಳ್’ ದಿನಪತ್ರಿಕೆಯ ಬೆಳಗಾವಿ ಆವೃತ್ತಿಯ ವಿಶೇಷ ಪ್ರತಿನಿಧಿ ಮಲ್ಲಿಕಾರ್ಜುನ್ ಮುಗಳಿ ಹಾಗೂ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆಯ ಮುಖ್ಯ ಪ್ರತಿನಿಧಿ ಸುನಿಲ್ ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾಮದ ಹಿರಿಯ ನಾಗರಿಕ ಕಾಳೂ ತೋರವತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿ ತಾಲೂಕು ಪ್ರಾಥಮಿಕ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶೇಖರ್ ಕರಂಬಳಕರ್, ನ್ಯಾಯವಾದಿ ಸುಧೀರ್ ಚವ್ಹಾಣ್, ವೇದಾಂತ ಫೌಂಡೇಶನ್ ಅಧ್ಯಕ್ಷೆ ಜಯಶ್ರೀ ಪಾಟೀಲ್, ಅರುಣ್ ಮು. ಚಂಡೀಕರ್, ನಾರಾಯಣ ನಲವಡೆ, ಶುಭಾಂಗಿ ಪಾಟೀಲ್ ಹಾಗೂ ಸತೀಶ್ ಪಾಟೀಲ್ ಪ್ರಮುಖವಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರೇಮರಾಜ್ ಚಿಂಡಕ್ ಫೌಂಡೇಶನ್ನಿಂದ 275 ತಟ್ಟೆಗಳು, ವೇದಾಂತ ಫೌಂಡೇಶನ್ನಿಂದ 35,000 ರೂಪಾಯಿ ಮೌಲ್ಯದ ಬಣ್ಣ, ಶ್ರೀಕಾಂತ್ ನಗಾರೆಯವರಿಂದ 7,000 ರೂಪಾಯಿ ವೆಚ್ಚದ ನಾಮಫಲಕ, ಹಜಾರೆ ಕಿಚನ್ನಿಂದ 275 ಬಟ್ಟಲುಗಳು ಹಾಗೂ ಕಲ್ಪನಾ ಗಾಡ್ಗೀಳ್ ಅವರು 5,000 ರೂಪಾಯಿ ಆರ್ಥಿಕ ನೆರವು ನೀಡಿದರು. ಇದೇ ವೇಳೆ ಮುಂಬೈನ ಸುದಾಮ್ ಪ್ರಭು ಅವರಿಂದ ಪ್ರವಚನ, ಹರಿಭಜನ ಹಾಗೂ ಸಂತ ಮಂಡಳಿಯಿಂದ ನಗರಸಂಕೀರ್ತನೆ ನಡೆದವು. ಧನಗರ ಸಮುದಾಯದ ಬಾಂಧವರಿಂದ ಸಾಂಪ್ರದಾಯಿಕ ‘ಗಜ್ಜೊ’ ನೃತ್ಯ ಮತ್ತು ವಿದ್ಯಾರ್ಥಿಗಳಿಂದ ಭಜನೆ ನೆರವೇರಿತು. ಇನ್ನು ಸಭೆಯನ್ನು ಉದ್ದೇಶಿಸಿ ಮೋಹನ್ ಪಾಟೀಲ್, ರವೀಂದ್ರ ಹರಗುಡೆ, ಅನುತಾರಿಹಾಳಕರ್ ಹಾಗೂ ವೈಜು ಗುರವ್ ಭಾಷಣ ಮಾಡಿದರು.
