ಬಳ್ಳಾರಿಯ ಐತಿಹಾಸಿಕ ಕೋಟೆಯ ಬೆಟ್ಟದಲ್ಲಿ ದಾರುಣ ಘಟನೆಯೊಂದು ಸಂಭವಿಸಿದೆ. ಹಬ್ಬದ ಪ್ರಯುಕ್ತ ಕುಟುಂಬದೊಂದಿಗೆ ಕೋಟೆ ವೀಕ್ಷಣೆಗೆ ಬಂದಿದ್ದ ತಂದೆ ಹಾಗೂ ಹತ್ತು ವರ್ಷದ ಮಗ ಬೆಟ್ಟದ ಮೇಲಿನ ಹೊಂಡದಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.
ಆಂಧ್ರಪ್ರದೇಶದ ಕಣೇಕಲ್ ಮೂಲದ ರಮೇಶ (38) ಹಾಗೂ ಅವರ ಪುತ್ರ ಹೊನ್ನೂರಸ್ವಾಮಿ (10) ಮೃತಪಟ್ಟ ದುರದೃಷ್ಟಕರ ದುರಂತ ಇದಾಗಿದೆ. ಹಬ್ಬದ ರಜೆಯ ನಿಮಿತ್ತ ಕುಟುಂಬ ಸಮೇತ ಬಳ್ಳಾರಿ ಕೋಟೆ ವೀಕ್ಷಣೆಗೆ ಬಂದಿದ್ದ ವೇಳೆ, ಬಾಲಕ ಹೊನ್ನೂರಸ್ವಾಮಿ ಬೆಟ್ಟದ ಮೇಲಿದ್ದ ಹೊಂಡದಲ್ಲಿದ್ದ ಮೀನುಗಳನ್ನು ನೋಡಲು ಹೋಗಿ, ಅವುಗಳನ್ನು ಹಿಡಿಯುವ ಯತ್ನದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾನೆ. ನೀರಿನಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ತಂದೆ ರಮೇಶ ತಕ್ಷಣವೇ ಹೊಂಡಕ್ಕೆ ಧುಮುಕಿದ್ದಾರಾದರೂ, ನೀರಾಳ ಅರಿವಿಲ್ಲದೇ ತಂದೆಯೂ ನೀರಿನಲ್ಲಿ ಮುಳುಗಿ ಅಸಹಾಯಕರಾಗಿ ಮೃತಪಟ್ಟಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಈ ಸಂಬಂಧ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
