ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆಗೆ ಅಧಿಕಾರಿಗಳು ಹಾಗೂ ಶಾಸಕರು ಸರಿಯಾದ ಸಮಯಕ್ಕೆ ಬಾರದಿದ್ದಕ್ಕೆ ಖಾನಾಪುರದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಿಗದಿತ ಸಮಯಕ್ಕೆ ಬರದೆ ನಿರ್ಲಕ್ಷ್ಯ ವಹಿಸಿದ ಆಡಳಿತ ವರ್ಗದ ಧೋರಣೆಯನ್ನು ಖಂಡಿಸಿ ಕರವೇ ಕಾರ್ಯಕರ್ತರು ಘೋಷಣೆ ಕೂಗುತ್ತಾ ಸಭೆಯನ್ನು ಬಹಿಷ್ಕರಿಸಿ ಹೊರನಡೆದಿದ್ದಾರೆ.
ನವೆಂಬರ್ 1 ರ ಕನ್ನಡ ರಾಜ್ಯೋತ್ಸವದ ನಿಮಿತ್ತ ಖಾನಾಪುರ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ 11:00 ಗಂಟೆಗೆ ಪೂರ್ವಭಾವಿ ಸಭೆ ಏರ್ಪಡಿಸಲಾಗಿತ್ತು. ಸಭೆಗೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ನೂರಾರು ಕಾರ್ಯಕರ್ತರು ನಿಗದಿತ ಸಮಯಕ್ಕೆ ಆಗಮಿಸಿದ್ದರು. ಆದರೆ ಸಭೆಯ ನೇತೃತ್ವ ವಹಿಸಬೇಕಿದ್ದ ತಹಶೀಲ್ದಾರ್ ವಿಠ್ಠಲ ಜಿ. ಅವರಾಗಲಿ ಅಥವಾ ಸ್ಥಳೀಯ ಶಾಸಕಿ ವಿಠ್ಠಲ ಹಲಗೇಕರ್ ಅವರಾಗಲಿ ಸಮಯಕ್ಕೆ ಸರಿಯಾಗಿ ಬಾರದ ಕಾರಣ ಸಭಾಂಗಣದಲ್ಲಿ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಸುಮಾರು ಒಂದೂವರೆ ಗಂಟೆಗಳ ಕಾಲ ಕಾದು ಬೇಸತ್ತ ಕರವೇ ಕಾರ್ಯಕರ್ತರು ಮತ್ತು ಸಾರ್ವಜನಿಕರು ಆಡಳಿತ ವರ್ಗದ ಬೇಜವಾಬ್ದಾರಿತನದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಂತಿಮವಾಗಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು. ಖಾನಾಪುರ ತಾಲೂಕಿನ ಇತಿಹಾಸದಲ್ಲೇ ಅಧಿಕಾರಿಗಳ ಸಮಯಪಾಲನೆ ಕೊರತೆಯಿಂದ ಸಭೆ ಬಹಿಷ್ಕಾರಗೊಂಡ ಅಪರೂಪದ ಘಟನೆ ಇದಾಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
