ಬಾಗಲಕೋಟೆ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಒಣಗಿ ಹೋಗಿರುವ ಬೆಳೆಗಳನ್ನು ಕೇಂದ್ರ ಬರ ಅಧ್ಯಯನ ತಂಡ ನೇರವಾಗಿ ಪರಿಶೀಲಿಸಿದೆ. ಜಿಲ್ಲಾಡಳಿತದಿಂದ ಪ್ರಾಥಮಿಕ ಮಾಹಿತಿ ಪಡೆದ ಬಳಿಕ ಕೃಷಿ ಭೂಮಿಗೆ ಭೇಟಿ ನೀಡಿರುವ ತಂಡ, ಸಂಕಷ್ಟದಲ್ಲಿರುವ ರೈತರ ನೋವಿಗೆ ಕಿವಿಯಾಗಿದೆ. ಸೂಕ್ತ ಪರಿಹಾರಕ್ಕಾಗಿ ರೈತರು ಮನವಿ ಮಾಡಿದ್ದು, ವರದಿ ಆಧಾರದ ಮೇಲೆ ಮುಂದಿನ ಕ್ರಮ ನಿರೀಕ್ಷಿಸಲಾಗಿದೆ.


ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಅವರ ನೇತೃತ್ವದಲ್ಲಿ ಕೇಂದ್ರ ಬರ ಅಧ್ಯಯನ ತಂಡಕ್ಕೆ ಜಿಲ್ಲೆಯ ಬೆಳೆ ಹಾನಿಯ ಸಮಗ್ರ ಚಿತ್ರಣವನ್ನು ನೀಡಲಾಯಿತು. ಸಿಇಓ ಗಜಾನನ್ ಬಾಲೆ ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮಳೆ ಕೊರತೆಯ ಕುರಿತು ಸವಿಸ್ತಾರವಾದ ಚರ್ಚೆ ನಡೆಯಿತು. ಇದರ ಬಳಿಕ ಡಾ. ಮಾನ್ ಸಿಂಗ್ ನೇತೃತ್ವದ ಕೇಂದ್ರ ತಂಡವು ಗುಳೆದಗುಡ್ಡ, ಬಾಗಲಕೋಟೆ, ಹುನಗುಂದ ಮತ್ತು ಇಲಕಲ್ ತಾಲೂಕುಗಳ ಪ್ರಮುಖ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡು ಪರಿಸ್ಥಿತಿಯ ಗಂಭೀರತೆಯನ್ನು ಅವಲೋಕಿಸಿತು.

ಪ್ರವಾಸದ ವೇಳೆ ಗುಳೆದಗುಡ್ಡ ತಾಲೂಕಿನ ಹಳದೂರ ಗ್ರಾಮದ ರೈತ ಹುಸೇನ್ ಬಿ ಡಾಲಾಯತ್ ಹಾಗೂ ಬಾಗಲಕೋಟೆ ತಾಲೂಕಿನ ಶಿರೂರು ಗ್ರಾಮದ ರೈತರ ಹೊಲಗಳಿಗೆ ಕೇಂದ್ರ ತಂಡವು ಭೇಟಿ ನೀಡಿತು. ಈ ಸಂದರ್ಭದಲ್ಲಿ ಮೆಕ್ಕೆಜೋಳ ಮತ್ತು ಸಜ್ಜೆ ಬೆಳೆಗಳು ಸಂಪೂರ್ಣ ಹಾನಿಯಾಗಿರುವುದನ್ನು ಖುದ್ದು ವೀಕ್ಷಿಸಲಾಯಿತು. ಸಂಕಷ್ಟಕ್ಕೆ ಸಿಲುಕಿರುವ ರೈತರಿಂದ ನೇರವಾಗಿ ಮಾಹಿತಿ ಸಂಗ್ರಹಿಸಿದ ತಂಡದ ಎದುರು, ನಷ್ಟಕ್ಕನುಗುಣವಾಗಿ ಶೀಘ್ರವೇ ಸೂಕ್ತ ಬರ ಪರಿಹಾರ ಘೋಷಿಸುವಂತೆ ರೈತರು ಬಲವಾದ ಆಗ್ರಹ ಮಂಡಿಸಿದರು.

