ಖಾನಾಪುರ ತಾಲೂಕು ಬರಗಾಲ ಘೋಷಣೆ ಹಾಗೂ ರೈತರ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರೈತ ಸಂಘ ಬೆಂಗಳೂರು, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ಅಖಂಡ ಕರ್ನಾಟಕ ರೈತ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಹಾಗೂ ಮಹಿಳಾ ಸಂಘಟನೆಗಳ ಸಹಯೋಗದಲ್ಲಿ ಸೋಮವಾರ ಲಿಂಗನಮಠ ಕ್ರಾಸ್ನಲ್ಲಿ ಬೃಹತ್ ರಸ್ತೆ ತಡೆ ಚಳವಳಿ ನಡೆಸಲಾಯಿತು.


ಬೆಳಗಾವಿ–ತಾಳಗುಪ್ಪ ಹಾಗೂ ರಾಮನಗರ–ಧಾರವಾಡ ರಾಜ್ಯ ಹೆದ್ದಾರಿಗಳ ಮಧ್ಯಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಖಾನಾಪುರ, ಕಿತ್ತೂರು, ಅಳ್ನಾವರ, ಹಳಿಯಾಳ ಸೇರಿದಂತೆ ವಿವಿಧ ತಾಲೂಕುಗಳ ರೈತರು, ರೈತ ಮುಖಂಡರು, ವ್ಯಾಪಾರಸ್ಥರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಖಾನಾಪುರ ತಾಲೂಕು ಬರಗಾಲ ಘೋಷಣೆ ಮಾಡುವುದರ ಜೊತೆಗೆ ಪ್ರತಿ ಎಕರೆಗೆ 25,000 ಪರಿಹಾರ ಧನವನ್ನು ನೀಡಬೇಕು. ಪ್ರತಿ ಟನ್ ಕಬ್ಬಿಗೆ ₹6,000 ಬೆಲೆ ನಿಗದಿಪಡಿಸಬೇಕು, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಕೃಷಿ ಉತ್ಪನ್ನಗಳಿಗೆ ಸ್ಥಿರ ಬೆಂಬಲ ಬೆಲೆ ನಿಗದಿಪಡಿಸಬೇಕು, ಖಾನಾಪುರ ತಾಲೂಕಿನ ಮಲಪ್ರಭಾ ನದಿಗೆ ಅಣೆಕಟ್ಟು ನಿರ್ಮಿಸಿ ನೀರಾವರಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ವಿದ್ಯುತ್ ಖಾಸಗೀಕರಣ ಕೈಬಿಟ್ಟು ರೈತರಿಗೆ ಪ್ರತಿದಿನ ಏಳು ಗಂಟೆ ತ್ರಿಫೇಸ್ ವಿದ್ಯುತ್ ಪೂರೈಸಬೇಕು ಹಾಗೂ ತಾಲೂಕಿನ ಹದಗೆಟ್ಟಿರುವ 830 ಕಿ.ಮೀ. ರಸ್ತೆಗಳನ್ನು ತುರ್ತಾಗಿ ದುರಸ್ತಿಪಡಿಸಬೇಕು ಎಂದು ಆಗ್ರಹಿಸಿದರು.
ಗೃಹಲಕ್ಷ್ಮಿ, ವಿಧವಾ, ಅಂಗವಿಕಲರು ಹಾಗೂ ವೃದ್ಧಾಪ್ಯ ವೇತನ ಸೇರಿದಂತೆ ವಿವಿಧ ಯೋಜನೆಗಳ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಡಾ. ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು. ರೈತರ ಜ್ವಲಂತ ಸಮಸ್ಯೆಗಳಿಗೆ ಸರ್ಕಾರ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದು ಪ್ರತಿಭಟಕಾರರು ಒತಾಯಿಸಿದರು.
ಈ ಸಂದರ್ಭದಲ್ಲಿ ರೈತರ ಪ್ರತಿಭಟನೆಯನ್ನು ಬೆಂಬಲ ಸೂಚಿಸಿ ಮಾತನಾಡಿದ ಅವರೊಳ್ಳಿ ಬಿಳಕಿ ರುದ್ರಸ್ವಾಮಿ ಮಠದ ಪರಮಪೂಜ್ಯರಾದ ಚನ್ನಬಸವ ದೇವರು ಖಾನಾಪುರದ ತಹಶೀಲ್ದಾರರು ಹಾಗೂ ಶಾಸಕರು ಇಬ್ಬರು ಸೇರಿಕೊಂಡು ಸರಕಾರಕ್ಕೆ ಖಾನಾಪುರ ತಾಲೂಕಿನ ಬೆಳೆ ಹಾಗೂ ಬರಗಾಲದ ಬಗ್ಗೆ ಗಮನಕ್ಕೆ ತಂದು ಎಂಟು ದಿನದೊಳಗೆ ಬರಗಾಲ ಘೋಷಿಸುವಂತೆ ಮುತುವರ್ಜಿ ವಹಿಸಬೇಕು. ಒಂದು ವೇಳೆ ಎಂಟು ದಿನದೊಳಗೆ ಬರಗಾಲ ಘೋಷಣೆ ಆಗದೆ ಇದ್ದಲ್ಲಿ ಮತ್ತೆ ತಾಲೂಕಿನ ರೈತಬಾಂಧವರ ಜೊತೆಗೂಡಿ ತೀವ್ರವಾದ ಪ್ರತಿಭಟನೆ ಮಾಡಲಾಗುವುದು ಹಾಗೂ ಪ್ರತಿಭಟನೆಗೆ ಆಗಮಿಸುವ ಎಲ್ಲ ರೈತ ಬಾಂಧವರಿಗೆ ಅವರು ಬಿಳಿಕೆ ಶ್ರೀಮಠದ ಪರವಾಗಿ ದಾಸೋಹದ ಕಾರ್ಯಕ್ರಮವನ್ನು ನಡೆಸಿಕೊಡುತ್ತೇವೆ ಎಂದರು.
ತಹಸೀಲ್ದಾರ್ ದುಂಡಪ್ಪ ಕುಮಾರ ರೈತರ ಮನವಿ ಸ್ವೀಕರಿಸಿ ಮುಂದಿನ ಕ್ರಮಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಪೋಲಿಸ್ ಇಲಾಖೆಯ ನಂದಗಡ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವಿಕುಮಾರ ಧರ್ಮಟ್ಟಿ ಅವರು ರೈತರ ಪ್ರತಿಭಟನೆಗೆ ಸಹಕರಿಸಿದ್ದರಿಂದ ಸಮಸ್ತ ರೈತ ಬಾಂಧವರು ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಪ್ರತಿಭಟನೆಯ ಸಂದರ್ಭದಲ್ಲಿ ಅವರೊಳ್ಳಿ-ಬಿಳಕಿ ರುದ್ರಸ್ವಾಮಿ ಮಠದ ಚನ್ನಬಸವದೇವರು, ಹಿಡಕಲ್ ಪ್ರಭು ಅಡವಿಸಿದ್ದೇಶ್ವರ ಮಹಾಸ್ವಾಮೀಜಿಗಳು, ತೊಲಗಿ ಅದೃಶ್ಯಾನಂದ ಮಹಾಸ್ವಾಮೀಜಿ, ಅಖಿಲ ಕರ್ನಾಟಕ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕಿಶೋರ ಮಿಠಾರಿ, ನಂದಗಡ ಮಾರ್ಕೆಟಿಂಗ್ ಅಧ್ಯಕ್ಷರಾದ ಶ್ರೀಶೈಲ್ ಮಾಟೊಳ್ಳಿ,
ಲಿಂಗನಮಠ ಗ್ರಾಪಂ ಮಾಜಿ ಅಧ್ಯಕ್ಷರಾದ ಕಾಶೀಮ ಹಟ್ಟಿಹೊಳಿ, ರೈತ ಮುಖಂಡರಾದ ಪಾಂಡುರಂಗ ಮೀಟಗಾರ, ಬಾಬು ಬಿಜಾಪುರ, ಮಹಾoತೇಶ ಸಂಗೊಳ್ಳಿ, ಯಲ್ಲಪ್ಪ ಗುಪಿತ, ಯಲ್ಲಾರಿ ನೀಲಜಕರ, ಮೈಕಲ್ ಫಾರ್ನಾಡಿಸ, ಬಸವರಾಜ ಮುಗಳಿಹಾಳ, ಚಂದ್ರಗೌಡ ಪಾಟೀಲ, ರಾಜು ರಪಾಟಿ, ಬಸವರಾಜ ನಾಯಕ, ಪಾಂಡು ಪಾಟೀಲ, ಭೈರು ಮಾಂದವಿ, ದತ್ತಾ ಬಿಡಕರ, ಸೇಬಸ್ತೀನ ಸೋಜ, ಬಿಷ್ಟಪ್ಪ ಸುಂಬಳಿ, ಗೋಪಾಲ ಅಗಸಿಮನಿ, ಕೂತಬುದ್ದಿನ ಶೇಖ, ಮಲ್ಲಪ್ಪ ಪರಕನಟ್ಟಿ ಯಲಪ್ಪ ಪಾಟೀಲ ಹಾಗೂ ತಾಲೂಕಿನ ರೈತ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.
