ನವದೆಹಲಿ: ಇಬ್ಬಲೂರು ಫೈರಿಂಗ್ ರೇಂಜ್ ಬಳಿ ರಕ್ಷಣಾ ಇಲಾಖೆಯಲ್ಲಿ ಅಧೀನದಲ್ಲಿರುವ ಖಾಲಿ ಜಾಗದಲ್ಲಿ ಉದ್ಯಾನವನ ನಿರ್ಮಾಣ, ಯಲಹಂಕ ಹೆಚ್ಎಎಲ್ ವಾಯುಪಡೆ ಸುತ್ತಮುತ್ತಲಿನ ಪ್ರದೇಶದ ಕಟ್ಟಡ ನಿರ್ಮಾಣ ನಿಯಮ ಸಡಿಲಿಕೆ, ಮೇಕ್ರಿ ಸರ್ಕಲ್ ರಸ್ತೆ ಅಗಲೀಕರಣಕ್ಕೆ ಜಮೀನು ಹಸ್ತಾಂತರ, ಸರ್ಜಾಪುರ ರಸ್ತೆ ಅಗಲೀಕರಣ ಸೇರಿದಂತೆ ಬೆಂಗಳೂಗಿನ 7 ಅಭಿವೃದ್ಧಿ ಯೋಜನೆಗಳಿಗೆ ರಕ್ಷಣಾ ಇಲಾಖೆಯ ಜಾಗ ಹಾಗೂ ಅನುಮತಿ ನೀಡಬೇಕು ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಮನವಿ ಸಲ್ಲಿಸಿದರು.

ದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರನ್ನು ಶಿವಕುಮಾರ್ ಅವರು ಸೋಮವಾರ ಭೇಟಿಯಾಗಿ ಮನವಿ ಸಲ್ಲಿಸಿದರು.
*ಇಬ್ಬಲೂರಲ್ಲಿ ಉದ್ಯಾನವನಕ್ಕೆ ಇಲಾಖೆ ಜಾಗಕ್ಕೆ ಮನವಿ*
ಇಬ್ಬಲೂರು ಫೈರಿಂಗ್ ರೇಂಜ್ ಬಳಿ ಸುಮಾರು 730 ಎಕರೆ ರಕ್ಷಣಾ ಇಲಾಖೆಗೆ ಸೇರಿದ ಜಮೀನು ಪ್ರಸ್ತುತ ಬಳಕೆಯಾಗದೆ ಖಾಲಿ ಇದೆ. ಅಭ್ಯಾಸಕ್ಕೆಂದು ಮತ್ತೊಂದು ರೇಂಜ್ ಸ್ಥಾಪಿಸಿರುವುದರಿಂದ ಈ ಸ್ಥಳ ಯೋಗ್ಯ ರೀತಿಯಲ್ಲಿ ಬಳಕೆಯಾಗುತ್ತಿಲ್ಲ. ಈ ಜಾಗದಲ್ಲಿ ನಮ್ಮ ಸರ್ಕಾರ ಉದ್ಯಾನವನ ಹಾಗೂ ಹಸಿರು ವಲಯವನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದೆ. ರಾಜ್ಯ ಸರ್ಕಾರವು ಜಮೀನಿನ ಮಾಲಿಕತ್ವವನ್ನು ಕೋರುತ್ತಿಲ್ಲ. ವಾರಣಾಸಿಯಲ್ಲಿ ಆರ್ ಬಿಐ ತನ್ನ ಜಾಗವನ್ನು ಉದ್ಯಾನವನ ನಿರ್ಮಾಣ, ಬಳಕೆ ನೀಡಿರುವುದನ್ನು ಪರಿಗಣಿಸಿ ಅದರಂತೇ ಅನುಮತಿ ನೀಡಬೇಕು” ಎಂದು ಪತ್ರದಲ್ಲಿ ಕೋರಿದ್ದಾರೆ.
*ಬೆಂಗಳೂರಿನ ರಕ್ಷಣಾ ಜಮೀನಿನಲ್ಲಿರುವ ಕೊಳಚೆ ಪ್ರದೇಶಗಳ ಪುರೋಭಿವೃದ್ಧಿ*
“ಬೆಂಗಳೂರಿನ ರಕ್ಷಣಾ ಇಲಾಖೆಯ ವಿವಿಧ ಸ್ಥಳಗಳಲ್ಲಿ ಪ್ರಸ್ತುತ ಹತ್ತು ಅಧಿಸೂಚಿತ ಕೊಳಚೆ ಪ್ರದೇಶಗಳಿದ್ದು, ಅವು ಸುಮಾರು 43.838 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದೆ. ಈ ದೀರ್ಘಕಾಲೀನ ಸಮಸ್ಯೆಯನ್ನು ಪ್ರಾಯೋಗಿಕ, ನ್ಯಾಯಸಮ್ಮತವಾಗಿ, ಪರಸ್ಪರ ಸಮ್ಮತಿಯ ಮೇರೆಗೆ ಬಗೆಹರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಬೆಂಗಳೂರು ನಗರದ ಮಿತಿಯಲ್ಲಿ ‘ಸಮಾನ ವಿಸ್ತೀರ್ಣದ ಜಮೀನು’ ಗುರುತಿಸುವುದು ದುಸ್ತರವಾಗಿದ್ದು, ಬೆಂಗಳೂರಿನಂತಹ ದಟ್ಟವಾಗಿ ಅಭಿವೃದ್ಧಿ ಹೊಂದಿದ ಮಹಾನಗರದಲ್ಲಿ, ಅಸ್ತಿತ್ವದಲ್ಲಿರುವ ಸೇನಾ ಅಥವಾ ರಕ್ಷಣಾ ಸಂಸ್ಥೆಗಳಿಗೆ ಹೊಂದಿಕೊಂಡಂತೆ ಪರ್ಯಾಯ ಜಮೀನನ್ನು ಗುರುತಿಸುವುದು ಸಾಧ್ಯವಿಲ್ಲ ಎಂಬುದನ್ನು ಮಿಲಿಟರಿ ಅಧಿಕಾರಿಗಳೂ ಒಪ್ಪಿಕೊಂಡಿದ್ದಾರೆ” ಎಂದು ವಿವರಿಸಿದ್ದಾರೆ.
“ಇದರ ಬದಲಾಗಿ, ಸೂಕ್ತವಾದ ಪರ್ಯಾಯ ಸ್ಥಳದಲ್ಲಿ ಸಮಾನ ವಿಸ್ತೀರ್ಣದ ಸರ್ಕಾರಿ ಜಮೀನನ್ನು ಹಸ್ತಾಂತರಿಸಲು ಅನುಮತಿ ನೀಡಬಹುದು. ರಕ್ಷಣಾ ಇಲಾಖೆಯ ಅಧಿಕಾರಿಗಳು ಸೂಕ್ತ ಜಮೀನನ್ನು ಆಯ್ಕೆ ಮಾಡಲು ಅನುಕೂಲವಾಗುವಂತೆ ಅಂತಹ ಎಲ್ಲಾ ಜಮೀನುಗಳ ಪಟ್ಟಿಯನ್ನು ಹಂಚಿಕೊಳ್ಳಲು ನಮ್ಮ ಸರ್ಕಾರ ಸಿದ್ಧವಾಗಿದೆ. ಮಳೆಗಾಲದಲ್ಲಿ ಈ ಪ್ರದೇಶಗಳು ಜಲಾವೃತಗೊಂಡು ಕೊಳಚೆ ಪ್ರದೇಶ ನಿವಾಸಿಗಳು ಜೀವನ ದುಸ್ತರವಾಗುತ್ತಿದೆ. ಈ ಪ್ರದೇಶಗಳಲ್ಲಿ ದುರಸ್ತಿ, ತುರ್ತಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಳು ಅನುಮತಿ ನೀಡಬೇಕು” ಎಂದು ಕೋರಿದ್ದಾರೆ.
*ವಿಮಾನ ನಿಲ್ದಾಣಗಳ ಬಳಿ ಕಟ್ಟಡ ನಿರ್ಮಾಣ ನಿಯಮ ಸಡಿಲಿಸಿ*
“ಪ್ರಸ್ತುತ ಬೆಂಗಳೂರಿನಲ್ಲಿ ನಾಲ್ಕು ವಿಮಾನ ನಿಲ್ದಾಣಗಳು ಕಾರ್ಯಾಚರಿಸುತ್ತಿವೆ. ಅವುಗಳಲ್ಲಿ ಹೆಚ್ಎಎಲ್ ವಿಮಾನ ನಿಲ್ದಾಣ, ಯಲಹಂಕ ವಾಯುನೆಲೆ ಎರಡು ರಕ್ಷಣಾ ವಾಯುನೆಲೆಗಳಾಗಿವೆ. ಬೆಂಗಳೂರು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು, ಜಾಗತಿಕ ಟೆಕ್ ಕೇಂದ್ರವಾಗಿದೆ. ಹೆಚ್ಎಎಲ್ ವಿಮಾನ ನಿಲ್ದಾಣವು ಬೆಂಗಳೂರಿನ ಕೇಂದ್ರ ಭಾಗದಲ್ಲಿದ್ದು, ಅಲ್ಲಿ ಅಭಿವೃದ್ಧಿಗೆ ಭಾರಿ ಬೇಡಿಕೆಯಿದೆ. ಹೆಚ್ಎಎಲ್ ವಿಮಾನ ನಿಲ್ದಾಣದ ಅಧಿಕಾರಿಗಳು ವಿಧಿಸುತ್ತಿರುವ ಹೆಚ್ಚುವರಿ ನಿರ್ಬಂಧಗಳು ಅದರ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ತೀವ್ರ ಅಡ್ಡಿಯುಂಟುಮಾಡುತ್ತಿವೆ. ನಗರಾಭಿವೃದ್ಧಿ ಹಾಗೂ ಸಂಚಾರ ಯೋಜನೆಗಳ ಮೇಲೆ ಪರಿಣಾಮ ಬೀರುತ್ತಿದೆ” ಎಂದು ವಿವರಿಸಿದ್ದಾರೆ.
“ವಿಮಾನದ ಸುರಕ್ಷತೆ ಮತ್ತು ನಗರದ ಅಭಿವೃದ್ಧಿ ಅಗತ್ಯಗಳೆರಡನ್ನೂ ಗಮನದಲ್ಲಿಟ್ಟುಕೊಂಡು G.S.R 751 (E) ಪ್ರಕಾರ ಬೆಂಗಳೂರಿನ ರಕ್ಷಣಾ ವಿಮಾನ ನಿಲ್ದಾಣಗಳ 20 ಕಿ.ಮೀ ವ್ಯಾಪ್ತಿಯಲ್ಲಿ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಈ ಬಗ್ಗೆ ರಕ್ಷಣಾ ವಿಮಾನ ನಿಲ್ದಾಣಗಳ ಅಧಿಕಾರಿಗಳಿಗೆ ಸ್ಪಷ್ಟ ನಿಬಂಧನೆಗಳು/ಮಾರ್ಗಸೂಚಿಗಳನ್ನು ನೀಡಿ. ಕಡ್ಡಾಯ NOC ನಿಯಮವನ್ನು 20 ಕಿ.ಮೀ ಬದಲಿಗೆ 15 ಕಿ.ಮೀ ವ್ಯಾಪ್ತಿಗೆ ಸೀಮಿತಗೊಳಿಸುವಂತೆ ಹಾಗೂ ಹೆಲಿಕಾಪ್ಟರ್ಗಳ ಜೋಡಣೆ ಮಾಡುತ್ತಿರುವ ತುಮಕೂರಿನ ಹೆಚ್ಎಎಲ್-II ಗೆ ಹೆಲಿಕಾಪ್ಟರ್ ಪರೀಕ್ಷಾ ಚಟುವಟಿಕೆಗಳನ್ನು ಸ್ಥಳಾಂತರಿಸುವ ಮನವಿಯನ್ನು ಪರಿಗಣಿಸಬೇಕು” ಎಂದು ಮನವಿ ಮಾಡಿದ್ದಾರೆ.
*ಅಗರ- ಸರ್ಜಾಪುರ ರಸ್ತೆ ವಿಸ್ತರಣೆ*
“ಬೆಂಗಳೂರು ಮಾಸ್ಟರ್ ಪ್ಲಾನ್ 2015 ರ ಅನ್ವಯ ಬೆಳ್ಳಂದೂರು ಕೆರೆಯ ಪಕ್ಕದಲ್ಲಿ ಅಗರ ರಸ್ತೆಯಿಂದ ಈಜಿಪುರ ಮಾರ್ಗವಾಗಿ ಸರ್ಜಾಪುರ ರಸ್ತೆ ಸಂಪರ್ಕಿಸುವ 24 ಮೀಟರ್ ರಸ್ತೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಹೆಚ್ಚು ಸಂಚಾರ ದಟ್ಟಣೆ ಇರುವ ಒಳ ಮತ್ತು ಹೊರ ವರ್ತುಲ ರಸ್ತೆಗಳನ್ನು ಬೈಪಾಸ್ ಮಾಡುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಗುರಿಯನ್ನು ಹೊಂದಿದೆ. ಈ ರಸ್ತೆ ನಿರ್ಮಾಣಕ್ಕಾಗಿ, ಅಗತ್ಯವಿರುವ 10.07 ಎಕರೆ ಬಳಕೆಗೆ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಸ್ಥಳೀಯ ಮಿಲಿಟರಿ ಅಧಿಕಾರಿಗಳೊಂದಿಗೆ ಜಂಟಿ ಸಮೀಕ್ಷೆಯ ನಂತರ, ವಿಸ್ತೀರ್ಣವನ್ನು 13.709 ಎಕರೆಗೆ ಪರಿಷ್ಕರಿಸಿ, 04.02.2025 ರ ಅರ್ಜಿ ಸಲ್ಲಿಸಲಾಗಿದೆ. ಈ ಜಮೀನುಗಳನ್ನು ಹಸ್ತಾಂತರಿಸುವ ಪ್ರಕ್ರಿಯೆಯನ್ನು ವೇಗಗೊಳಿಸಿ, ಕಾಮಗಾರಿಗಳನ್ನು ಶೀಘ್ರವಾಗಿ ಕೈಗೆತ್ತುಕೊಳ್ಳುವ ಮೂಲಕ ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ನೆರವಾಗಬೇಕು” ಎಂದು ಕೋರಿದ್ದಾರೆ.
*ಅವಳಿ ಸುರಂಗ ಯೋಜನೆ*
“ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA) ಮತ್ತು ಉತ್ತರ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ನಿವಾರಿಸಲು, ಈ ಭೂಗತ ಸುರಂಗ ಮಾರ್ಗವು ಬಳ್ಳಾರಿ ರಸ್ತೆಯ ಹೆಬ್ಬಾಳ (ಎಸ್ಟೀಮ್ ಮಾಲ್ ಜಂಕ್ಷನ್) ಅನ್ನು ಸೆಂಟ್ರಲ್ ಸಿಲ್ಕ್ ಬೋರ್ಡ್ಗೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ. ಹೆಬ್ಬಾಳ ಡಿಫೆನ್ಸ್ ಡೈರಿ ಫಾರ್ಮ್ನ ಭಾಗವಾಗಿದ್ದ 2.039 ಎಕರೆ ರಕ್ಷಣಾ ಜಮೀನಿನ ಅಗತ್ಯವಿದೆ. ಈ ಭೂಗತ ಸುರಂಗ ಯೋಜನೆಯು PRTC ಮತ್ತು DGQA ನ ರಕ್ಷಣಾ ಪ್ರದೇಶದ ಮೇಕ್ರಿ ಸರ್ಕಲ್ ಮೂಲಕ ಹಾದುಹೋಗುತ್ತದೆ. ಇಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಈಗಾಗಲೇ ಅನುಮತಿ ಕೋರಿದೆ. ಯಾವುದೇ ಅಡಚಣೆಯಾಗದಂತೆ ಕಾರ್ಯನಿರ್ವಹಿಸಲು ಅನುಮತಿ ಕೋರಿ 25.03.2025 ರಂದು ಅರ್ಜಿ ಸಲ್ಲಿಸಲಾಗಿತ್ತು. ಈ ಸಂಬಂಧ, ಅಧಿಕಾರಿಗಳ ಮಂಡಳಿಯು ತನ್ನ ದಿನಾಂಕ 29.07.2026 ಆದೇಶದಲ್ಲಿ, ಲೈಸೆನ್ಸ್ ಶುಲ್ಕವಾಗಿ ಜಮೀನು ಬೆಲೆಯ ಶೇ 33 ರಷ್ಟು ಭಾಗವಾದ 60.72 ಕೋಟಿ ರೂಪಾಯಿಗಳನ್ನು ಪಾವತಿಸಲು ಆದೇಶಿಸಿದೆ. ಈ ಮೊತ್ತ ದುಬಾರಿಯಾಗಿದೆ. ಆದ್ದರಿಂದ ಲೈಸೆನ್ಸ್ ಶುಲ್ಕವನ್ನು ಜಮೀನು ಬೆಲೆಯ ಶೇ.2 ಕ್ಕೆ ಇಳಿಸಬೇಕು” ಎಂದು ಮನವಿ ಮಾಡಿದ್ದಾರೆ.
*ಲಿಂಕ್ ರಸ್ತೆ ನಿರ್ಮಾಣಕ್ಕೆ ನೆರವು ನೀಡಿ*
“ಏರ್ಪೋರ್ಟ್ ರಸ್ತೆಯಿಂದ (ಬಳ್ಳಾರಿ ರಸ್ತೆ) ಸರೋವರ ಲೇಔಟ್ಗೆ ಲಿಂಕ್ ರಸ್ತೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಹೆಬ್ಬಾಳ ಡಿಫೆನ್ಸ್ ಡೈರಿ ಫಾರ್ಮ್ ಹಿಂಭಾಗದಲ್ಲಿರುವ ಸರೋವರ ಲೇಔಟ್ಗೆ ನೇರ ರಸ್ತೆ ಸಂಪರ್ಕ ಕಲ್ಪಿಸಲು ಈ ಯೋಜನೆ ಅತ್ಯಗತ್ಯವಾಗಿದೆ. ಪರಿಷ್ಕೃತ ಮಾಸ್ಟರ್ ಪ್ಲಾನ್ 2015 ರ ಪ್ರಕಾರ, ಸಂಪರ್ಕ ಮತ್ತು ನಗರ ಮೂಲಸೌಕರ್ಯವನ್ನು ಸುಧಾರಿಸಲು 18-ಮೀಟರ್ ಅಗಲದ ರಸ್ತೆಯನ್ನು ಪ್ರಸ್ತಾಪಿಸಲಾಗಿದೆ. ಬಿಬಿಎಂಪಿ (BBMP) ಅಗತ್ಯ ಸಮೀಕ್ಷೆಗಳನ್ನು ಪೂರ್ಣಗೊಳಿಸಿದ್ದು, 6.837 ಎಕರೆ ರಕ್ಷಣಾ ಜಮೀನು ಹಸ್ತಾಂತರಕ್ಕೆ ಕೋರಿ ರಕ್ಷಣಾ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದೆ. ಇದಕ್ಕೆ ಅನುಮತಿ ನೀಡಬೇಕು” ಎಂದು ಕೋರಿದ್ದಾರೆ.
*ಮೇಕ್ರಿ ಸರ್ಕಲ್ ರಸ್ತೆ ಅಗಲೀಕರಣಕ್ಕೆ ರಕ್ಷಣಾ ಇಲಾಖೆ ಜಮೀನು ಹಸ್ತಾಂತರ*
“ಜಿಬಿಎ (GBA) ಬಳ್ಳಾರಿ ರಸ್ತೆಯ ಮೇಕ್ರಿ ಸರ್ಕಲ್ವರೆಗೆ ರಸ್ತೆ ಅಗಲೀಕರಣ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. DGQA ಮತ್ತು PRTC ಯಿಂದ ಅಗತ್ಯವಿರುವ 0.775 ಎಕರೆ ಜಮೀನು ಹಸ್ತಾಂತರ ಕೋರಿ ಅರ್ಜಿ ಸಲ್ಲಿಸಲಾಗಿದೆ. ಇದು ದ್ವಿಪಥದ ರಸ್ತೆಯನ್ನು ಮೂರು ಪಥದ ರಸ್ತೆಯಾಗಿ ಅಗಲೀಕರಣ ಗೊಳಿಸಲು ನೆರವಾಗುತ್ತದೆ. ಈ ಮೂಲಕ ವಿಮಾನ ನಿಲ್ದಾಣದ ಪ್ರಯಾಣದ ಹಾದಿಯಲ್ಲಿ ಪ್ರಮುಖ ಜಂಕ್ಷನ್ ಆಗಿರುವ ಮೇಕ್ರಿ ಸರ್ಕಲ್ನಲ್ಲಿ ಸಂಚಾರ ದಟ್ಟಣೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ರಾಜ್ಯ ಸರ್ಕಾರದ ಎಲ್ಲಾ ಈ ಪ್ರಸ್ತಾವನೆಗಳನ್ನು ಪರಿಗಣಿಸಬೇಕು” ಎಂದು ರಕ್ಷಣಾ ಸಚಿವರಿಗೆ ಸಿಎಂ ಮನವಿ ಸಲ್ಲಿಸಿದ್ದಾರೆ.
