ನಂದಗಡದ ಮಾದರಲ್ಲಿ ಕಿತ್ತೂರಿನಲ್ಲಿಯೂ ಥೀಮ್ ಪಾರ್ಕ್ ಮಾಡಲು 30 ಕೋಟಿ ರೂ. ಅನುದಾನದಲ್ಲಿ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಸೋಮವಾರ ಕಿತ್ತೂರಿನ ವೀರ ರಾಣಿ ಕಿತ್ತೂರು ಚನ್ನಮ್ಮನ ಭವನದಲ್ಲಿ ಬೆಳಗಾವಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಚನ್ನಮ್ಮನ ಕಿತ್ತೂರು ಉತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕಸ ವಿಲೇವಾರಿ ಮಾಡಲು ಆಧುನಿಕ ತಂತ್ರಜ್ಞಾನದ ವಾಹನ ಬೇಕು. ಕಿತ್ತೂರು ಉತ್ಸವ ಬಂದಾಗ ಮಾತ್ರ ಜಿಲ್ಲಾಡಳಿತ ಶುಚಿಮಾಡುತ್ತದೆ. ಪ್ರತಿನಿತ್ಯ ಶುಚಿ ಮಾಡುವುದಕ್ಕೆ ಎಲ್ಲರ ಸಹಕಾರ ಅಗತ್ಯ. ಜಗತ್ತಿಗೆ ದೊಡ್ಡ ಸವಾಲು ಆಗಿರುವುದು ಕಸ. ಅದನ್ನು ಯಾವ ರೀತಿ ನಿಯಂತ್ರಣ ಮಾಡಬೇಕೆಂಬುದು ಯಕ್ಷ ಪ್ರಶ್ನೆಯಾಗಿದೆ ಎಂದರು.
ಬಂಗಾರಪ್ಪ ಮುಖ್ಯಮಂತ್ರಿಯಾದಾಗಿನಿಂದಲೂ ಸ್ಥಳೀಯ ಜನರ ಸಹಾಯ ಸಹಕಾರದಿಂದ ಆರಂಭವಾದ ಕಿತ್ತೂರು ಉತ್ಸವ ಈಗ ಸರಕಾರದಿಂದಲೇ ಐದು ಕೋಟಿ ರೂ. ಅನುದಾನದಲ್ಲಿ ಕಿತ್ತೂರು ಉತ್ಸವ ಆಚರಣೆ ಮಾಡಲಾಗುತ್ತಿದೆ ಎಂದರು.
ಉತ್ತರ ಕರ್ನಾಟಕದ ಐತಿಹಾಸಿಕ ಕಿತ್ತೂರು ಉತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಉದ್ಘಾಟನೆ ಮಾಡುವುದು ಬೇಡ ಈ ಬಾರಿ ಸಾಹಿತಿ, ಚಿಂತಕರಿಂದ ಉದ್ಘಾಟನೆ ಮಾಡಲು ನಿರ್ಧರಿಸಲಾಗಿದೆ ಎಂದರು.
ಕಿತ್ತೂರು ಇರುವಷ್ಟು ಪ್ರಾಮುಖ್ಯತೆ ಕಾಕತಿಗೂ ಕೊಡುತ್ತೇವೆ. ಅಲ್ಲಿಯೂ ಉತ್ಸವವನ್ನು ಕಿತ್ತೂರು ಉತ್ಸವದ ಅನುದಾನದಲ್ಲಿ ಮಾಡುತ್ತೇವೆ ಎಂದರು.
ಮಕ್ಕಳಿಗಾಗಿ ಈ ಬಾರಿ ವಿಜ್ಞಾನ ಪ್ರದರ್ಶನ ಮಾಡಿದರೆ ವಿದ್ಯಾರ್ಥಿಗಳ ಸಂಖ್ಯೆಯೂ ಕಿತ್ತೂರು ಉತ್ಸವದಲ್ಲಿ ಹೆಚ್ಚಾಗುತ್ತದೆ. ಇನ್ನೂ ರಸ್ತೆಯ ಪಕ್ಕದಲ್ಲಿರುವ ಗಿಡ ಗಂಟೆಗಳನ್ನು ತೆರವುಗೊಳಿಸಲು ಒಂದು ಕಿಲೋಮೀಟರ್ 10 ಸಾವಿರ ರೂ. ಅನುದಾನವನ್ನು ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆ ಮಾಡಲಾಗುತ್ತದೆ. ಅದನ್ನು ತೆರವು ಮಾಡುವ ಕೆಲಸವನ್ನು ಲೋಕೋಪಯೋಗಿ ಇಲಾಖೆಯವರು ಮಾಡಬೇಕು ಎಂದು ಸೂಚನೆ ನೀಡಿದರು.
ಶಾಸಕ ಬಾಬಾಸಾಹೇಬ್ ಪಾಟೀಲ್ ಮಾತನಾಡಿ, ಕಳೆದ ಬಾರಿಯ ಕೆಲ ಲೋಪದೋಷಗಳನ್ನು ಸರಿಪಡಿಸಿಕೊಂಡು ಈ ಸಲದ ಕಿತ್ತೂರು ಉತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡೋಣ. ಸಾರ್ವಜನಿಕರ ಅಭಿಲಾಷೆಯಂತೆ ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ ಎಂದರು.
ಕಿತ್ತೂರಿನ ಚನ್ನಮ್ಮ ಬಗ್ಗೆ ಇತಿಹಾಸ ತಿಳಿಸುವ ನಿಟ್ಟಿನಲ್ಲಿ ಪ್ರೌಢ ಶಾಲೆಯ ಆಯ್ದ ತರಗತಿಯ ಮಕ್ಕಳನ್ನು ಕರೆ ತರೆದು ತಿಳಿಸುವ ಕೆಲಸ ಮಾಡಲಾಗುವುದು ಎಂದರು.
ಕಿತ್ತೂರು ಉತ್ಸವ ಅದ್ದೂರಿಯಾಗಿ ಮಾಡಲು ವಿವಿಧ ಕಮಿಟಿಯನ್ನು ರಚಿಸಲಾಗಿದೆ. ಇನ್ನೂ ಜನರ ಸಲಹೆ ಇದ್ದರೇ ಸಲ್ಲಿಸಬಹುದು ಎಂದರು.
ಇದಕ್ಕೂ ಮುನ್ನ ಕಿತ್ತೂರಿನ ವಿವಿಧ ಗಣ್ಯರು ಹಾಗೂ ಕಿತ್ತೂರಿನ ಜನರು ಕಿತ್ತೂರು ಉತ್ಸವದ ಬಗ್ಗೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಬೈಲಹೊಂಗಲ ಡಿವೈಎಸ್ಪಿ ವೀರಯ್ಯ ಹಿರೇಮಠ, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಡಿಡಿಪಿಐ ಲೀಲಾವತಿ ಹಿರೇಮಠ ಇದ್ದರು. ಕಿತ್ತೂರು ಸಂಸ್ಥಾನ ಹಾಗೂ ನುಚ್ಚನಕಿಮಠದ ಸ್ವಾಮೀಜಿ ಸಾನಿದ್ಯ ವಹಿಸಿದರು.
