ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ ನಡೆದಿದ್ದ ಮಾಜಿ ಯೋಧ ಹಾಗೂ ಅವರ ಪುತ್ರಿಯ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿತ್ತೂರು ಪೊಲೀಸರು ಕೇವಲ ಎರಡೇ ದಿನಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಹಾಡಹಗಲೇ ನಡೆದ ಈ ಕೃತ್ಯ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿತ್ತು.

ಸೆಪ್ಟೆಂಬರ್ 16 ರಂದು ಬೆಳಿಗ್ಗೆ 11:15 ರ ಸುಮಾರಿಗೆ ಅವರಾದಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಈ ಘಟನೆ ನಡೆದಿತ್ತು. ಆಸ್ತಿ ವ್ಯಾಜ್ಯದ ದ್ವೇಷದಿಂದಾಗಿ ಬಸಪ್ಪ ಶಿವನಪ್ಪ ಕುಂದರಗಿ (65), ಸಂಗಪ್ಪ ಶಿವನಪ್ಪ ಕುಂದರಗಿ (55) ಹಾಗೂ ಬಸಪ್ಪನ ಮಗ ಮಡಿವಾಳಪ್ಪ ಕುಂದರಗಿ (34) ಎಂಬ ಆರೋಪಿಗಳು ಏಕಾಏಕಿ ನುಗ್ಗಿ ದಾಳಿ ನಡೆಸಿದ್ದರು. ಧಾರವಾಡ ನಿವಾಸಿ ಹಾಗೂ ಮಾಜಿ ಯೋಧ ರುದ್ರಪ್ಪ ಶಿವನಪ್ಪ ಕುಂದರಗಿ ಮತ್ತು ಅವರ ಮಗಳು ಶಶಿಕಲಾ ಕುಂದರಗಿ ಅವರನ್ನು ಕುಡಗೋಲು ಹಾಗೂ ಕಲ್ಲುಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅಷ್ಟೇ ಅಲ್ಲದೆ, ತಂದೆಯ ಮೇಲಿನ ಹಲ್ಲೆಯನ್ನು ತಡೆಯಲು ಬಂದ ಮಗಳ ಜಡೆಯನ್ನು ಕತ್ತರಿಸಿ ದುಷ್ಕರ್ಮಿಗಳು ಅತಿ ಅಮಾನುಷ ವಿಕೃತಿ ಮೆರೆದಿದ್ದರು. ಸ್ಥಳದಲ್ಲಿದ್ದ ಕಾರ್ ಡ್ರೈವರ್ ರಾಹುಲ್ ಎಂಬುವವರ ಮೇಲೆಯೂ ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಿತ್ತೂರು ಪೊಲೀಸ್ ಠಾಣೆಯ ತನಿಖಾ ತಂಡವು, ತ್ವರಿತ ಕಾರ್ಯಾಚರಣೆ ನಡೆಸಿ ಕೇವಲ 48 ಗಂಟೆಗಳ ಒಳಗೆ ಮೂವರು ಹಂತಕರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಈ ಕ್ಷಿಪ್ರ ಹಾಗೂ ಯಶಸ್ವಿ ತನಿಖೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ವಿಶೇಷವಾಗಿ ಶ್ಲಾಘಿಸಿದ್ದಾರೆ.
ಆಸ್ತಿಗಾಗಿ ಸ್ವಂತ ರಕ್ತ ಸಂಬಂಧಿಗಳೇ ರಸ್ತೆಗಿಳಿದು ಪಂಚಾಯತಿ ಕಚೇರಿಯಲ್ಲೇ ಇಂತಹ ಘೋರ ಕೃತ್ಯ ಎಸಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಘಾತ ಮತ್ತು ಖಂಡನೆಗೆ ಕಾರಣವಾಗಿದೆ.
