bagalkot

ಊಟದ ವಿಚಾರಕ್ಕೆ ಗಲಾಟೆ; ಪೊಲೀಸ್ ಪೇದೆಯಿಂದ ಹಲ್ಲೆ ಆರೋಪ

Share

ಊಟದ ವಿಚಾರವಾಗಿ ಉಂಟಾದ ಕ್ಷುಲ್ಲಕ ಕಾರಣದ ಗಲಾಟೆಯಲ್ಲಿ, ದಾಬಾ ಮಾಲೀಕನ ಮೇಲೆ ಪೊಲೀಸ್ ಪೇದೆಯೊಬ್ಬರು ಹಲ್ಲೆ ನಡೆಸಿದ್ದಾರೆನ್ನಲಾದ ಘಟನೆ ಬಾಗಲಕೋಟೆಯ ಗದ್ದನಕೇರಿ ಕ್ರಾಸ್ ಬಳಿ ನಡೆದಿದ್ದು, ತಲೆಗೆ ಗಂಭೀರ ಗಾಯವಾದ ದಾಬಾ ಮಾಲೀಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್‌ನಲ್ಲಿರುವ ಡಾಬಾದ ಮಾಲೀಕ ಮೆಹಬೂಬ್ ಸಾಬ್ ಪಟ್ಟೇವಾಲೆ (57) ಎಂಬುವವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಹವಾಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಮೂಲತಃ ಬೀಳಗಿ ತಾಲ್ಲೂಕಿನ ಸುನಗ ಗ್ರಾಮದ ನಿವಾಸಿಯಾಗಿರುವ ಪೊಲೀಸ್ ಪೇದೆ ಅಡಿವೆಪ್ಪ ರಬಕವಿ ಎಂಬುವವರೇ ಈ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸೆಪ್ಟೆಂಬರ್ 17 ರಂದು ರಾತ್ರಿ 11 ಗಂಟೆಯ ಸುಮಾರಿಗೆ ಡಾಬಾಗೆ ಬಂದಿದ್ದ ಪೇದೆ ಅಡಿವೆಪ್ಪ ಊಟ ಕೇಳಿದ್ದಾರೆ. ಊಟ ಖಾಲಿಯಾಗಿದೆ ಎಂದು ಡಾಬಾ ಮಾಲೀಕ ಹೇಳಿದ್ದಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದ್ದು, ಈ ವೇಳೆ ಮಾಲೀಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆಯಿಂದ ತಲೆಗೆ ಗಂಭೀರ ಗಾಯಗೊಂಡಿದ್ದ ಮೆಹಬೂಬ್ ಸಾಬ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಇಂದು ಬೆಳಿಗ್ಗೆ ಅವರು ಮೃತಪಟ್ಟಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಮೃತನ ಸಂಬಂಧಿಕರು ಪೊಲೀಸ್ ಸಿಬ್ಬಂದಿ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದ್ದು, ಈ ಸಂಬಂಧ ಕಲಾದಗಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Tags:

error: Content is protected !!