Vijaypura

10 ತಾಸು 30 ನಿಮಿಷಗಳಲ್ಲಿ 36 ಎಕರೆ ಹೊಲ ಹರಗಿದ ಎತ್ತುಗಳು

Share

ಕೃಷಿ ಕ್ಷೇತ್ರದಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ, ಎತ್ತುಗಳ ಮೂಲಕವೇ ಕೇವಲ 10 ತಾಸು 30 ನಿಮಿಷಗಳಲ್ಲಿ ಬರೋಬ್ಬರಿ 36 ಎಕರೆ ಜಮೀನನ್ನು ಹರಗಿರುವುದು ಗಮನ ಸೆಳೆದಿದೆ.

ಹೌದು… ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ರೈತ ಮಹೇಶ ಒಡೆಯರ್ ಅವರ ಜಮೀನಿನಲ್ಲಿ ಈ ವಿಶೇಷ ಉಳುಮೆ ಕಾರ್ಯ ನಡೆದಿದೆ. ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ಪ್ರಮುಖ ಪಾತ್ರ ವಹಿಸುವ ದಾನಯ್ಯ ಗುಗವಾಡ ಅವರ ಎತ್ತುಗಳು ನಿರಂತರವಾಗಿ ಹೊಲ ಹರಗಿ ಈ ಸಾಧನೆಗೆ ಕಾರಣವಾಗಿವೆ. ಬೆಳಗ್ಗಿನಿಂದ ಆರಂಭವಾದ ಉಳುಮೆ ಕಾರ್ಯ ಸುಮಾರು 10 ತಾಸು 30 ನಿಮಿಷಗಳ ಕಾಲ ನಿರಂತರವಾಗಿ ನಡೆದಿದ್ದು, ಈ ಅವಧಿಯಲ್ಲಿ ಒಟ್ಟು 36 ಎಕರೆ ಜಮೀನನ್ನು ಹರಗಲಾಗಿದೆ ಎಂದು ರೈತರು ತಿಳಿಸಿದ್ದಾರೆ. ಎತ್ತುಗಳ ಶಕ್ತಿ, ಅವುಗಳಿಗೆ ನೀಡಿರುವ ತರಬೇತಿ ಹಾಗೂ ಅವುಗಳೊಂದಿಗೆ ದುಡಿಯುವ ರೈತರ ಅನುಭವದಿಂದ ಇಷ್ಟು ದೊಡ್ಡ ಪ್ರಮಾಣದ ಜಮೀನನ್ನು ಕಡಿಮೆ ಅವಧಿಯಲ್ಲಿ ಹರಗಲು ಸಾಧ್ಯವಾಗಿದೆ. ಆಧುನಿಕ ಯಂತ್ರೋಪಕರಣಗಳ ನಡುವೆಯೂ ಎತ್ತುಗಳ ಮೂಲಕ ಇಂತಹ ಬೃಹತ್ ಪ್ರಮಾಣದ ಉಳುಮೆ ನಡೆದಿರುವುದು ಗ್ರಾಮಸ್ಥರ ಗಮನ ಸೆಳೆದಿದೆ. ಈ ಅಪರೂಪದ ಕೃಷಿ ಕಾರ್ಯವನ್ನು ಕಂಡ ಗ್ರಾಮಸ್ಥರು ಹಾಗೂ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾಂಪ್ರದಾಯಿಕ ಕೃಷಿ ಪದ್ಧತಿಯ ಮಹತ್ವ ಮತ್ತು ರೈತರ ಪರಿಶ್ರಮವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.

ಉಳುಮೆ ಕಾರ್ಯದಲ್ಲಿ ಬಸವರಾಜ ಸರಸ್ವತಿ, ಪ್ರವೀಣ್ ಕಲಘಟಗಿ, ನಾಗು ಸಿದ್ದನಾಥ, ಸುನೀಲ್ ಗುಗವಾಡ, ಬಸವರಾಜ ಹಂಜಿ, ಜ್ಞಾನೇಶ್ವರ ಜಾಧವ, ಪಿಂಟು ಸಿದ್ದನಾಥ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Tags:

error: Content is protected !!