ಗಣೇಶೋತ್ಸವ ಮುಗಿಯುತ್ತಿದ್ದಂತೆ ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಮತ್ತೊಂದು ವಿಶಿಷ್ಟ ಆಚರಣೆ ಆರಂಭವಾಗುತ್ತದೆ. ಅದೇ ಜೋಕುಮಾರ ಹಬ್ಬ. ಮಳೆ ಬಂದು ಕೆರೆ-ಕಟ್ಟೆಗಳು ತುಂಬಲಿ, ಹೊಲಗಳಲ್ಲಿ ಬೆಳೆ ಸಮೃದ್ಧವಾಗಲಿ ಎಂಬ ಆಶಯದೊಂದಿಗೆ ಮಹಿಳೆಯರು ಜೋಕುಮಾರನ ಮೂರ್ತಿಯನ್ನು ಮನೆ ಮನೆಗೆ ಹೊತ್ತು ತಂದು ಹಾಡುಗಳನ್ನು ಹಾಡುತ್ತಾರೆ. ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಇಂದಿಗೂ ಜೀವಂತವಾಗಿರುವ ಈ ಅಪರೂಪದ ಸಂಪ್ರದಾಯದ ಕುರಿತ ಒಂದು ವಿಶೇಷ ವರದಿ ಇಲ್ಲಿದೆ.

“ಅಡ್ಡಡ್ಡ ಮಳಿ ಬಂದು… ದೊಡ್ಡದೊಡ್ಡ ಕೆರೆ ತುಂಬಿ… ಗೊಡ್ಡುಗಳೆಲ್ಲ ಹೈನಾಗಿ… ಜೋಕುಮಾರ ಮಳಿ ತಂದ…” ಗಣಪತಿ ಹೋದ ಮಾರನೇ ದಿನವೇ ಜನ್ಮ ತಾಳುತ್ತಾನೆ ಎಂಬ ನಂಬಿಕೆಯ ಜೋಕುಮಾರ… ಉತ್ತರ ಕರ್ನಾಟಕದ ರೈತರ ಪಾಲಿಗೆ ಮಳೆ-ಬೆಳೆಯ ಆಶಾಕಿರಣ. ನಾಗಠಾಣ ಗ್ರಾಮದಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ವಿಶಿಷ್ಟ ಆಚರಣೆಯಲ್ಲಿ ಮಹಿಳೆಯರು ಬಿದಿರಿನ ಬುಟ್ಟಿಯಲ್ಲಿ ಜೋಕುಮಾರನ ಮಣ್ಣಿನ ಮೂರ್ತಿಯನ್ನು ಹೊತ್ತುಕೊಂಡು ಮನೆ ಮನೆಗೆ ತೆರಳುತ್ತಾರೆ. ಬೇವಿನ ತಪ್ಪಲಿನಿಂದ ಮುಚ್ಚಿದ ಬುಟ್ಟಿಯಲ್ಲಿ ಅಗಲ ಮುಖ, ಚೂಪಾದ ಹುರಿಮೀಸೆ, ತೆರೆದ ಬಾಯಿ, ಗಿಡ್ಡ ಕಾಲು ಹಾಗೂ ಕೈಯಲ್ಲಿ ಸಣ್ಣ ಕತ್ತಿ ಹಿಡಿದಿರುವ ಜೋಕುಮಾರನ ಮೂರ್ತಿ ನೋಡುಗರ ಗಮನ ಸೆಳೆಯುತ್ತದೆ. ಪಾರ್ವತಿ, ಸುಶೀಲಾ, ಮೀನಾಕ್ಷಿ, ಬನ್ನೇವ್ವ ಸೇರಿದಂತೆ ಮಹಿಳೆಯರು ಜೋಕುಮಾರನ ಲೀಲಾವಳಿಗಳನ್ನು ರಾಗಬದ್ಧವಾಗಿ ಹಾಡುತ್ತಾ ಊರಿನ ಮನೆಗಳಿಗೆ ತೆರಳುತ್ತಾರೆ.
ಇನ್ನೂ ಜೋಕುಮಾರನು ಮನೆ ಮುಂದೆ ಬಂದಾಗ ಮನೆಯವರು ಬೆಣ್ಣೆ, ಎಣ್ಣೆ, ಉಪ್ಪು, ಹುಣಸೆಕಾಯಿ, ಜೋಳ, ಅಕ್ಕಿ ಸೇರಿದಂತೆ ವಿವಿಧ ಧಾನ್ಯ ಹಾಗೂ ಆಹಾರ ಪದಾರ್ಥಗಳನ್ನು ನೀಡುತ್ತಾರೆ. ಮನೆಯಲ್ಲಿರುವ ಚಿಕ್ಕಾಡ, ಗುಂಗಾಡ, ತಿಗಣೆ ಸೇರಿದಂತೆ ಕೀಟಗಳು ಜೋಕುಮಾರನೊಂದಿಗೆ ಹೋಗಲಿ ಎಂಬ ನಂಬಿಕೆಯೂ ಇದೆ. ಜೊತೆಗೆ ಉತ್ತಮ ಮಳೆ ಸುರಿದು, ಹೊಲ-ಗದ್ದೆಗಳಲ್ಲಿ ಸಮೃದ್ಧ ಬೆಳೆ ಬರಲಿ ಎಂದು ಜೋಕುಮಾರನಲ್ಲಿ ಪ್ರಾರ್ಥಿಸುತ್ತಾರೆ. ಜೋಕುಮಾರನ ಹುಟ್ಟು, ಸಾವು, ಪುಂಡತನ, ಕಾಮ ಸೇರಿದಂತೆ ಆತನ ವಿವಿಧ ಸ್ವಭಾವಗಳನ್ನು ಬಿಂಬಿಸುವ ಜನಪದ ಹಾಡುಗಳು ಈ ಆಚರಣೆಯ ಮತ್ತೊಂದು ವಿಶೇಷತೆ. ಮಹಿಳೆಯರ ಹಾಡು, ಮಕ್ಕಳ ಕುತೂಹಲ, ಯುವಕರ ಸಂಭ್ರಮ ಹಾಗೂ ರೈತರ ನಂಬಿಕೆ… ಇವೆಲ್ಲವೂ ಸೇರಿ ನಾಗಠಾಣದ ಬೀದಿಗಳಲ್ಲಿ ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಮತ್ತೊಮ್ಮೆ ಜೀವಂತವಾಗಿಸುತ್ತವೆ. ಆಧುನಿಕ ಜೀವನಶೈಲಿಯಿಂದಾಗಿ ಹಲವು ಹಬ್ಬ-ಆಚರಣೆಗಳಲ್ಲಿ ಶ್ರದ್ಧೆ ಕಡಿಮೆಯಾಗುತ್ತಿದೆ. ಆದರೆ ನಮ್ಮ ಭಾಗದಲ್ಲಿ ಜೋಕುಮಾರ ಹಬ್ಬ ಇಂದಿಗೂ ವಿಶಿಷ್ಟವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಒಟ್ಟಾರೆ,ಕಾಲ ಬದಲಾಯಿತು… ಜೀವನಶೈಲಿ ಬದಲಾಯಿತು… ಹಬ್ಬಗಳ ಆಚರಣೆಯಲ್ಲೂ ಹಲವು ಬದಲಾವಣೆಗಳಾದವು. ಆದರೆ ಮಳೆ-ಬೆಳೆಯ ಆಶಯದೊಂದಿಗೆ ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಜೋಕುಮಾರನ ಈ ಆಚರಣೆ ಮಾತ್ರ ಇನ್ನೂ ಗ್ರಾಮೀಣ ಬದುಕಿನೊಂದಿಗೆ ಬೆಸೆದುಕೊಂಡಿದೆ. ಮುಂದಿನ ಪೀಳಿಗೆಗೂ ಈ ಹಾಡು ಕೇಳಿಸಲಿ… ಈ ಮಣ್ಣಿನ ಪರಿಮಳ ಪರಿಚಯವಾಗಲಿ… ಜೋಕುಮಾರನ ಈ ಅಪರೂಪದ ಸಂಪ್ರದಾಯ ಮುಂದೊಂದು ದಿನ ಕಣ್ಮರೆಯಾಗದೆ, ಇದೇ ರೀತಿ ತಲೆಮಾರುಗಳಿಂದ ತಲೆಮಾರುಗಳಿಗೆ ಸಾಗಲಿ ಎಂಬುದೇ ಎಲ್ಲರ ಆಶಯ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
