Savadatti

ಯಲ್ಲಮ್ಮನಗುಡ್ಡದ ವ್ಯಾಪರಸ್ಥರಿಗೆ ಶಾಕ್ ನೀಡಿದ ಅಧಿಕಾರಿಗಳು

Share

ಸೌಂದತ್ತಿಯ ಪ್ರಸಿದ್ಧ ಯಲ್ಲಮ್ಮನಗುಡ್ಡದಲ್ಲಿ ಭಕ್ತರಿಗೆ ಕಳಪೆ ಆಹಾರ ಹಾಗೂ ಅನಧಿಕೃತ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಅಧಿಕಾರಿಗಳು ಮುಗಿಬಿದ್ದಿದ್ದಾರೆ. ದೇವಸ್ಥಾನದ ಪ್ರಾಧಿಕಾರದ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಈ ದಿಢೀರ್ ದಾಳಿಯಿಂದ ವ್ಯಾಪಾರಸ್ಥರಿಗೆ ಶಾಕ್ ಎದುರಾಗಿದೆ.

ಸೌಂದತ್ತಿಯ ಐತಿಹಾಸಿಕ ರೇಣುಕಾ ಯಲ್ಲಮ್ಮನಗುಡ್ಡದಲ್ಲಿ ಭಕ್ತರ ಆರೋಗ್ಯದ ಜತೆ ಚೆಲ್ಲಾಟವಾಡುತ್ತಿದ್ದ ಅಂಗಡಿ ಮಾಲೀಕರ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದಾರೆ. ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಭಾವತಿ ಫಕ್ಕೀರಪುರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಗುಡ್ಡದ ಮೇಲಿನ ವಿವಿಧ ಕಿರಾಣಿ ಅಂಗಡಿಗಳು ಹಾಗೂ ಕುಂಕುಮ-ಭಂಡಾರ ಮಾರಾಟ ಮಳಿಗೆಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿತು.
ಪರಿಶೀಲನೆಯ ವೇಳೆ ಬಹುತೇಕ ಅಂಗಡಿಗಳಲ್ಲಿ ಮುಕ್ತಾಯ ದಿನಾಂಕ (ಎಕ್ಸ್‌ಪೈರಿ ಡೇಟ್) ಇಲ್ಲದ ತಂಪು ಪಾನೀಯಗಳು, ಆಹಾರ ಪ್ಯಾಕೆಟ್‌ಗಳು ಮತ್ತು ಕಳಪೆ ಗುಣಮಟ್ಟದ ಸಾಮಗ್ರಿಗಳು ಪತ್ತೆಯಾಗಿವೆ. ವಿಶೇಷವಾಗಿ, ದಿನಸಿ ಅಂಗಡಿಗಳಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ನಿಷೇಧಿತ ಔಷಧಿ ಮಾತ್ರೆಗಳನ್ನು ಮಾರಾಟ ಮಾಡುತ್ತಿರುವುದು ಅಧಿಕಾರಿಗಳ ಅಚ್ಚರಿಗೆ ಕಾರಣವಾಯಿತು. ಅಂಗಡಿಗಳಲ್ಲಿದ್ದ ತೀವ್ರ ಅಸ್ವಚ್ಛತೆ ಹಾಗೂ ಕಳಪೆ ವಸ್ತುಗಳನ್ನು ಕಂಡು ಕೆಂಡಾಮಂಡಲರಾದ ಅಧಿಕಾರಿಗಳು, “ನಿಮ್ಮ ಮನೆಯಲ್ಲೂ ಇದೇ ಕಳಪೆ ತರಕಾರಿ ಹಾಗೂ ಆಹಾರ ತಿನ್ನುತ್ತೀರಾ?” ಎಂದು ವರ್ತಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಲಕ್ಷಾಂತರ ಭಕ್ತರು ಆಗಮಿಸುವ ಈ ಪುಣ್ಯಕ್ಷೇತ್ರದಲ್ಲಿ ನಿಯಮ ಉಲ್ಲಂಘಿಸಿ ವ್ಯಾಪಾರ ಮಾಡುತ್ತಿರುವವರ ವಿರುದ್ಧ ಪ್ರಾಧಿಕಾರ ಕಠಿಣ ಮುನ್ಸೂಚನೆ ನೀಡಿದೆ. ಪರವಾನಗಿ ನವೀಕರಿಸದ ಮತ್ತು ಅನಧಿಕೃತವಾಗಿ ವ್ಯವಹಾರ ನಡೆಸುತ್ತಿದ್ದ ಹಲವು ಅಂಗಡಿಗಳ ವಿದ್ಯುತ್ ಹಾಗೂ ನೀರಿನ ಸಂಪರ್ಕವನ್ನು ತಕ್ಷಣವೇ ಕಡಿತಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಈ ರೀತಿಯ ವಂಚನೆ ಮುಂದುವರಿದರೆ ಮತ್ತಷ್ಟು ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!