Savadatti

‘ಮನೆಯ ತಿಗಣೆ ಓಡಿಸಮ್ಮಾ’ ಎಂದು ವಿಚಿತ್ರ ಹರಕೆ ಬರೆದ ಭಕ್ತ!

Share

ಉತ್ತರ ಕರ್ನಾಟಕದ ಪ್ರಸಿದ್ಧ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮನಗುಡ್ಡದ ದೇವಸ್ಥಾನದ ಹುಂಡಿ ಎಣಿಕೆಯಲ್ಲಿ ಕೋಟ್ಯಂತರ ರೂಪಾಯಿ ಕಾಣಿಕೆ ಹರಿದುಬಂದಿದೆ. ಆದರೆ, ಈ ಎಲ್ಲ ಹಣ, ಚಿನ್ನ-ಬೆಳ್ಳಿಯ ನಡುವೆ ಭಕ್ತನೊಬ್ಬ ಬರೆದಿರುವ ವಿಚಿತ್ರ ಅಪ್ಲಿಕೇಶನ್ ಪತ್ರವೊಂದು ಈಗ ಸಖತ್ ವೈರಲ್ ಹಾಗೂ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ!”

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಸಮೀಪವಿರುವ ಪ್ರಸಿದ್ಧ ಯಲ್ಲಮ್ಮನಗುಡ್ಡದ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ಹುಂಡಿ ಎಣಿಕೆ ಕಾರ್ಯ ಬುಧವಾರ ಮುಕ್ತಾಯಗೊಂಡಿದೆ. ಮೇ 7 ರಿಂದ ಅಕ್ಟೋಬರ್ 10 ರವರೆಗಿನ ಅವಧಿಯಲ್ಲಿ ಭಕ್ತರು ಸಲ್ಲಿಸಿದ್ದ ಕಾಣಿಕೆಯನ್ನು ಎಣಿಕೆ ಮಾಡಲಾಗಿದ್ದು, ಒಟ್ಟು ₹2.69 ಕೋಟಿ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ. ಇದರಲ್ಲಿ ₹2.34 ಕೋಟಿ ನಗದು, ₹26.95 ಲಕ್ಷ ಮೌಲ್ಯದ ಚಿನ್ನದ ಆಭರಣಗಳು ಹಾಗೂ ₹7.32 ಲಕ್ಷ ಮೌಲ್ಯದ ಬೆಳ್ಳಿ ವಸ್ತುವಿಷಯಗಳು ಸೇರಿವೆ. ಒಟ್ಟು 139 ಚೀಲಗಳ ಪೈಕಿ ಸದ್ಯ 54 ಚೀಲಗಳ ಎಣಿಕೆ ಮಾತ್ರ ಪೂರ್ಣಗೊಂಡಿದ್ದು, ಇನ್ನು 85 ಚೀಲಗಳ ಎಣಿಕೆ ಬಾಕಿ ಇದೆ ಎಂದು ದೇವಸ್ಥಾನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಭಾರಿ ಕಾಣಿಕೆಯ ರಾಶಿಯ ನಡುವೆ ದೇವಸ್ಥಾನದ ಸಿಬ್ಬಂದಿಗೆ ಅಚ್ಚರಿಯೊಂದು ಕಾದಿತ್ತು. ನಗದು ಮತ್ತು ಆಭರಣಗಳ ಜೊತೆಗೆ ಭಕ್ತನೊಬ್ಬ ಹುಂಡಿಯಲ್ಲಿ ಹಾಕಿದ್ದ ವಿಚಿತ್ರ ಬೇಡಿಕೆಯುಳ್ಳ ಪತ್ರವೊಂದು ಪತ್ತೆಯಾಗಿದೆ. ‘ಅಮ್ಮಾ, ನಮ್ಮ ಮನೆಯಲ್ಲಿ ವಿಪರೀತ ತಿಗಣೆಗಳಿವೆ. ಆ ಎಲ್ಲ ತಿಗಣೆಗಳು ನಮ್ಮ ಮನೆಯಿಂದ ತೊಲಗಲಿ, ಹಾಗೆ ಮಾಡಿದರೆ ನಿನ್ನ ಗುಡಿಗೆ ಬಂದು ಹಣ್ಣು-ಕಾಯಿ ಮಾಡಿಸುತ್ತೇನೆ’ ಎಂದು ಭಕ್ತನೊಬ್ಬ ದೇವಿಗೆ ಮುಗ್ಧವಾಗಿ ಮನವಿ ಮಾಡಿಕೊಂಡಿದ್ದಾನೆ. ಈ ಪತ್ರವು ಎಣಿಕೆ ಸಿಬ್ಬಂದಿ ಹಾಗೂ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದ್ದು, ಭಕ್ತರ ಮುಗ್ಧ ನಂಬಿಕೆಗೆ ಸಾಕ್ಷಿಯಾಗಿದೆ.

 

Tags:

error: Content is protected !!