ಬಸ್ ನಿಲುಗಡೆ ಮಾಡದಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದ ಘಟನೆ ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ರಾಂಪೂರ ಗ್ರಾಮದ ಬಳಿ ನಡೆದಿದೆ. ರಾಂಪೂರದಿಂದ ತಿಕೋಟ ಹಾಗೂ ವಿಜಯಪುರ ನಗರಕ್ಕೆ ಪ್ರತಿನಿತ್ಯ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಬಸ್‌ಗಾಗಿ ರಸ್ತೆ ಬದಿಯಲ್ಲಿ ಕಾಯಬೇಕಾಗಿದೆ. ಆದರೆ ರಾಂಪೂರ ಬಳಿ ಬಸ್ ನಿಲುಗಡೆ ಮಾಡದೆ ಚಾಲಕರು ಮುಂದಕ್ಕೆ ತೆರಳುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿ ದ್ದಾರೆ. ಈ ಸಮಸ್ಯೆಯಿಂದ ಶಾಲಾ- ಕಾಲೇಜುಗಳಿಗೆ ತೆರಳಲು ತೀವ್ರ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು, ಬಸ್ ನಿಲುಗಡೆಗೆ ಆಗ್ರಹಿಸಿ ಬೆಳಗಾವಿ–ಕಲಬುರಗಿ ರಾಜ್ಯ ಹೆದ್ದಾರಿ ತಡೆದು ಧರಣಿ ನಡೆಸಿದರು. ವಿದ್ಯಾರ್ಥಿಗಳ ಪ್ರತಿಭಟನೆಗೆ ಸ್ಥಳೀಯರೂ ಸಾಥ್ ನೀಡಿದ್ದು, ರಾಂಪೂರ ಬಳಿ ನಿಯಮಿತವಾಗಿ ಬಸ್ ನಿಲುಗಡೆ ಮಾಡುವಂತೆ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ವಿದ್ಯಾರ್ಥಿಗಳ ರಸ್ತೆ ತಡೆ ಪ್ರತಿಭಟನೆಯಿಂದ ಕೆಲಕಾಲ ರಾಜ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಯಿತು.

