ವಿಜಯಪುರ ನಗರದಲ್ಲಿ ಏಳು ದಿನಗಳ ಕಾಲ ಭಕ್ತಿ, ಸಂಭ್ರಮ ಹಾಗೂ ಸಡಗರದಿಂದ ಆರಾಧಿಸಲ್ಪಟ್ಟ ವಿಘ್ನ ನಿವಾರಕ ಗಣೇಶನಿಗೆ ಅದ್ಧೂರಿ ಬೀಳ್ಕೊಡುಗೆ ನೀಡಲಾಯಿತು. ವಿಸರ್ಜನೆಗೆ ಮಳೆರಾಯನ ಅಡ್ಡಿ ಎದುರಾದರೂ, ಉತ್ಸಾಹ ಮಾತ್ರ ಕೊಂಚವೂ ಕಡಿಮೆಯಾಗಲಿಲ್ಲ. ಡಿಜೆ ಸದ್ದಿಗೆ ಯುವಕ-ಯುವತಿಯರು ಮಳೆಯನ್ನೂ ಲೆಕ್ಕಿಸದೆ ಸಖತ್ ಸ್ಟೆಪ್ ಹಾಕಿದರು. ಕೇಸರಿ ಧ್ವಜಗಳ ಹಾರಾಟ, ಡಿಜೆ ಹಾಡುಗಳ ಅಬ್ಬರ ಹಾಗೂ ಗಣಪತಿ ಬಪ್ಪಾ ಮೋರಯಾ ಘೋಷಣೆಗಳು ವಿಸರ್ಜನಾ ಮೆರವಣಿಗೆಗೆ ಮತ್ತಷ್ಟು ಕಳೆ ತಂದವು. ದರ್ಗಾ ಹಾಗೂ ತಾಜ್ ಬೌಡಿ ಬಳಿ ನಿರ್ಮಿಸಲಾಗಿದ್ದ ಕೃತಕ ಹೊಂಡಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ನೆರವೇರಿತು. ಈ ಕುರಿತು ಇಲ್ಲಿದೆ ಒಂದು ವರದಿ…


ರವಿವಾರ ಬೆಳಗ್ಗಿನಿಂದಲೇ ಗಣೇಶ ಮಂಟಪಗಳಲ್ಲಿ ವಿಶೇಷ ಪೂಜೆ, ಆರತಿ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಹೂವು ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಿದ ಅಲಂಕೃತ ವಾಹನಗಳಲ್ಲಿ ಗಣೇಶ ಮೂರ್ತಿಗಳ ಮೆರವಣಿಗೆ ಆರಂಭವಾಯಿತು. ನಗರದ ವಿವಿಧ ಬಡಾವಣೆಗಳಿಂದ ಹೊರಟ ಮೆರವಣಿಗೆಗಳು ವಿಸರ್ಜನಾ ಸ್ಥಳದತ್ತ ಸಾಗಿದವು. ಮೂರು ಅಡಿಯಿಂದ ಬರೋಬ್ಬರಿ 21 ಅಡಿವರೆಗಿನ ವಿವಿಧ ಗಾತ್ರದ ಗಣೇಶ ಮೂರ್ತಿಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದವು.
ಇತ್ತ ಮೆರವಣಿಗೆಗೆ ಡಿಜೆ ಸೌಂಡ್ ಮತ್ತಷ್ಟು ರಂಗು ತುಂಬಿತ್ತು. ಡಿಜೆ ಹಾಡುಗಳಿಗೆ ಯುವಕ- ಯುವತಿಯರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಡಿ ಬಾಸ್ ಹಾಡುಗಳ ಜೊತೆ ಬಿಆರ್ಪಿ ಅಂದರೆ ಬಸನಗೌಡ ಪಾಟೀಲ ಯತ್ನಾಳ ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಕುರಿತ ಹಾಡುಗಳೂ ಡಿಜೆ ವಾಹನಗಳಲ್ಲಿ ಮೊಳಗಿದವು. ಈ ಹಾಡುಗಳಿಗೆ ಯುವಕರು ಕುಣಿದು ಕುಪ್ಪಳಿಸಿದರು.

ಇದರ ನಡುವೆ ವಿಜಯಪುರದಲ್ಲಿ ಮದ್ಯ ರಾತ್ರಿ ಭಾರಿ ಮಳೆ ಸುರಿಯಿತು. ಗಣೇಶ ವಿಸರ್ಜನೆಗೆ ಮಳೆರಾಯನಿಂದ ವಿಘ್ನ ಎದುರಾದರೂ, ಸಂಭ್ರಮ ಮಾತ್ರ ನಿಲ್ಲಲಿಲ್ಲ. ಮಳೆಯಲ್ಲೇ ಯುವಕ-ಯುವತಿಯರು ಡಿಜೆ ಸದ್ದಿಗೆ ಸಖತ್ ಸ್ಟೆಪ್ ಹಾಕಿದರು. ಕೆಲವರು ಮಳೆಯಲ್ಲಿ ನೆನೆಯುತ್ತಲೇ ಕುಣಿದು ಸಂಭ್ರಮಿಸಿದ ದೃಶ್ಯಗಳು ಕಂಡುಬಂದವು.
ಮತ್ತೊಂದೆಡೆ ಮೆರವಣಿಗೆಯಲ್ಲಿ ಕೇಸರಿ ಧ್ವಜಗಳ ಹಾರಾಟ ಗಮನ ಸೆಳೆಯಿತು. ಸಾಂಪ್ರದಾಯಿಕ ವಾದ್ಯಗಳ ನಾದ, ಭಕ್ತಿಗೀತೆಗಳು ಹಾಗೂ ‘ಗಣಪತಿ ಬಪ್ಪಾ ಮೋರಯಾ’ ಘೋಷಣೆಗಳು ವಾತಾವರಣವನ್ನು ಭಕ್ತಿಮಯಗೊಳಿಸಿದವು. ಭಕ್ತರು ಗಣೇಶನಿಗೆ ಭಕ್ತಿಪೂರ್ವಕ ಬೀಳ್ಕೊಡುಗೆ ನೀಡಿದರು.
ಇನ್ನೂ ಜೈಲ ದರ್ಗಾ ಎದುರಿಗೆ ಹಾಗೂ ಐತಿಹಾಸಿಕ ತಾಜ್ ಬೌಡಿ ಬಳಿ ನಿರ್ಮಿಸಲಾಗಿದ್ದ ಕೃತಕ ಹೊಂಡಗಳಲ್ಲಿ ವಿವಿಧ ಗಣೇಶ ಮೂರ್ತಿಗಳ ವಿಸರ್ಜನೆ ನೆರವೇರಿತು. ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟುನಿಟ್ಟಿನ ಬಂದೋಬಸ್ತ್ ಕೈಗೊಂಡಿದ್ದರು. ಎಸ್ಪಿ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು.
ಮಳೆರಾಯನ ಅಡ್ಡಿಯ ನಡುವೆಯೂ ಭಕ್ತಿ, ಸಂಗೀತ, ನೃತ್ಯ, ಕೇಸರಿ ಧ್ವಜಗಳ ಹಾರಾಟ ಹಾಗೂ ವರ್ಣರಂಜಿತ ಅಲಂಕಾರಗಳೊಂದಿಗೆ ವಿಜಯಪುರದಲ್ಲಿ ಗಣೇಶ ವಿಸರ್ಜನೆಯ ಸಂಭ್ರಮ ಕಳೆಗಟ್ಟಿತ್ತು.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್, ವಿಜಯಪುರ.
