ಬೆಳಗಾವಿಯ ವಡಗಾಂವದ ಕಾರಬಾರ ಗಲ್ಲಿಯಲ್ಲಿರುವ ಐತಿಹಾಸಿಕ ಶ್ರೀ ನರವೀರ ತಾನಾಜೀ ವ್ಯಾಯಾಮ ಶಾಲೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿಯು ಈ ವರ್ಷ ತನ್ನ ಶತಾಬ್ಧಿ ಮಹೋತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸಿಕೊಳ್ಳುತ್ತಿದೆ. ಶತಮಾನೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮಹಾಪ್ರಸಾದ ವಿತರಣೆಯು ಭಕ್ತಸಾಗರದ ನಡುವೆ ಯಶಸ್ವಿಯಾಗಿ ನೆರವೇರಿದೆ.

ಬೆಳಗಾವಿಯ ವಡಗಾಂವದ ಕಾರಬಾರ ಗಲ್ಲಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿಯು ತನ್ನ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ಸೆಪ್ಟೆಂಬರ್ 20, 2026 ರಂದು ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು. ಈ ಮಹತ್ವದ ಶತಾಬ್ಧಿ ಮಹೋತ್ಸವದ ಅಂಗವಾಗಿ ಮಂಡಳಿಯ ವತಿಯಿಂದ ವಿಶೇಷ ಗಣಹೋಮ ಹಾಗೂ ಸತ್ಯನಾರಾಯಣ ಪೂಜೆಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ಈ ಧಾರ್ಮಿಕ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಸುಮಾರು 20 ರಿಂದ 25 ಜೋಡಿಗಳು ಗಣಹೋಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪೂಜಾ ವಿಧಿವಿಧಾನಗಳನ್ನು ಪೂರೈಸಿದವು. ಹಿರಿಯರು, ಎಲ್ಲಾ ಕಾರ್ಯಕರ್ತರು ಹಾಗೂ ಮಹಿಳಾ ಮಂಡಳಿಯ ಸದಸ್ಯರು ಒಗ್ಗಟ್ಟಿನಿಂದ ಕೈಜೋಡಿಸಿದ ಪರಿಣಾಮವಾಗಿ ಇಡೀ ಕಾರ್ಯಕ್ರಮವು ಅತ್ಯಂತ ವ್ಯವಸ್ಥಿತವಾಗಿ ಮೂಡಿಬರಲು ಸಾಧ್ಯವಾಯಿತು ಎಂದು ಮಂಡಳದ ಪ್ರಮುಖರಾದ ಸಮೀತ್ ಹುಂದ್ರೇ ಅವರು ಹೆಮ್ಮೆಯಿಂದ ತಿಳಿಸಿದ್ದಾರೆ.
ಪೂಜೆಯ ನಂತರ ಹಮ್ಮಿಕೊಳ್ಳಲಾಗಿದ್ದ ಮಹಾಪ್ರಸಾದ ವಿತರಣಾ ಕಾರ್ಯಕ್ರಮದಲ್ಲಿ ಬೆಳಗಾವಿಯ ಸುತ್ತಮುತ್ತಲಿನಿಂದ ಬಂದ ಸುಮಾರು 10 ರಿಂದ 11 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಪ್ರಸಾದದ ಲಾಭ ಪಡೆದರು. ಮಂಡಳಿಯ ಶತಮಾನದ ಇತಿಹಾಸದಲ್ಲಿ ಈ ಬಾರಿಯ ಉತ್ಸವವು ಐತಿಹಾಸಿಕ ಹಾಗೂ ಅತಿ ದೊಡ್ಡ ಜನಸಾಗರದ ಉಪಸ್ಥಿತಿಯೊಂದಿಗೆ ದಾಖಲೆ ಬರೆದಿದ್ದು, ಭಕ್ತರ ಮೊಗದಲ್ಲಿ ಶತಾಬ್ಧಿಯ ಸಂಭ್ರಮ ಕಳೆಗಟ್ಟಿದೆ.
