ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದು, ಅದಕ್ಕೆ ತಡೆ ನೀಡುವಂತೆ ಕೋರಿ ನಟ ದರ್ಶನ್ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ದರ್ಶನ್ ಅವರ ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಟ್, ಪ್ರದೋಷ್ ಸಲ್ಲಿಸಿರುವ ಮಾಫಿ ಸಾಕ್ಷಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಒಂದು ವಾರದಲ್ಲಿ ಆದೇಶ ನೀಡುವಂತೆ ಬೆಂಗಳೂರು ಸೆಷನ್ಸ್ ನ್ಯಾಯಾಲಯಕ್ಕೆ ಆದೇಶಿಸಿದೆ.

ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ಪ್ರದೋಷ್ ತನ್ನನ್ನು ಮಾಫಿ ಸಾಕ್ಷಿ ಎಂದು ಪರಿಗಣಿಸುವಂತೆ ಕೋರಿ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸೆಷನ್ಸ್ ನ್ಯಾಯಾಲಯವೂ ಒಪ್ಪಿಗೆ ನೀಡಿತ್ತು. ಆದರೆ, ಇದಕ್ಕೆ ತಡೆ ನೀಡುವಂತೆ ಕೋರಿ ನಟ ದರ್ಶನ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಾದ-ಪ್ರತಿವಾದ ಆಲಿಸಿದ್ದ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಪ್ರದೋಷ್ ಸಲ್ಲಿಸಿರುವ ಅರ್ಜಿಯನ್ನು ಪುನರ್ಪರಿಶೀಲಿಸಿ ಒಂದು ವಾರದಲ್ಲಿ ಆದೇಶ ಹೊರಡಿಸುವಂತೆ ಸೆಷನ್ಸ್ ನ್ಯಾಯಾಲಯಕ್ಕೆ ಸೂಚಿಸಿದೆ.
ಯಾವುದೇ ವಾದ-ಪ್ರತಿವಾದ ಆಲಿಸದೆ ಅರ್ಜಿಯನ್ನು ಪುನರ್ಪರಿಶೀಲಿಸಿ ಒಂದು ವಾರದಲ್ಲಿ ಆದೇಶ ನೀಡಬೇಕು ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಆದೇಶಿಸಿದೆ.
