ಗಾಂಜಾ ಸೇರಿ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದು, ಇಬ್ಬರು ಆರೋಪಿಗಳು ಪರಾರಿಯಾದ ಘಟನೆ ಧಾರವಾಡದ ಶಿವಗಿರಿಯಲ್ಲಿ ನಡೆದಿದೆ.

ಧಾರವಾಡದ ಜನ್ನತ್ ನಗರ ವಾಸಿಯಾಗಿರುವ ಸೋಹೆಲ್ ಮಕಾಂದರ್ (24) ಬಂಧಿತ ಆರೋಪಿಯಾಗಿದ್ದಾನೆ. ಇನ್ನುಳಿದಂತೆ ಧಾರವಾಡ ಇರಾನಿ ಗಲ್ಲಿಯ ನಿವಾಸಿಗಳಾದ ಪಂಪು ಇರಾನಿ, ಪುರಖಾನ್ ಬೇಪಾರಿ ಸ್ಥಳದಿಂದ ಪರಾರಿಯಾಗಿದ್ದಾರೆ. ಧಾರವಾಡದ ಶಿವಗಿರಿಯ ಕೊನೆ ಬಸ್ ನಿಲ್ದಾಣದ ಬಳಿ ಬಂಧಿತ ಹಾಗೂ ಪರಾರಿಯಾದ ಆರೋಪಿಗಳು ಗಾಂಜಾ ಹಾಗೂ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ, ಓರ್ವನನ್ನು ಈಗ ಬಂಧಿಸಲಾಗಿದೆ. ಬಂಧಿತನಿಂದ 39 ಸಾವಿರ ರೂ. ಬೆಲೆಯ 755 ಗ್ರಾಂನ 197 ಪ್ಯಾಕೇಟ್ ಗಾಂಜಾ, 5 ಸಾವಿರ ರೂ. ಮೌಲ್ಯದ 23 ಗ್ರಾಂನ 7 ಪ್ಯಾಕೇಟ್ ಚರಸ ಹಾಗೂ 15 ಸಾವಿರ ರೂ. ಬೆಲೆಯ ಒಂದು ಬಜಾಜ್ ಕಂಪನಿಯ ಸಿಟಿ 100 ಬೈಕ್ ಸೇರಿ ಒಟ್ಟು 58 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
