Belagavi

ಬೆಳಗಾವಿ-ಕಿತ್ತೂರು-ಧಾರವಾಡ ರೈಲ್ವೆ ಯೋಜನೆಗೆ ಗ್ರಹಣ: ರಾಜ್ಯ ಸರ್ಕಾರದ ವಿರುದ್ಧ ಜಗದೀಶ್ ಶೆಟ್ಟರ್ ಆಕ್ರೋಶ

Share

ಬೆಳಗಾವಿ-ಕಿತ್ತೂರು-ಧಾರವಾಡ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅನುದಾನದ ಬಿಸಿ ತಟ್ಟಿದ್ದು, ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಯೋಜನೆಯ ವಿಳಂಬಕ್ಕೆ ಕಾರಣ ಎಂದು ಸಂಸದ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯ ಸರ್ಕಾರದ ಇಚ್ಛಾಶಕ್ತಿಯ ಕೊರತೆ ಹಾಗೂ ಅನುದಾನದ ಬಿಡುಗಡೆಯಲ್ಲಿನ ವಿಳಂಬದಿಂದಾಗಿ ಮಹತ್ತ್ವಾಕಾಂಕ್ಷೆಯ ಬೆಳಗಾವಿ-ಕಿತ್ತೂರು-ಧಾರವಾಡ ಹೊಸ ರೈಲ್ವೆ ಲೈನ್ ಯೋಜನೆಯ ಕಾಮಗಾರಿ ತೀವ್ರ ಹಿನ್ನಡೆ ಅನುಭವಿಸುತ್ತಿದೆ. ದಿವಂಗತ ಸುರೇಶ್ ಅಂಗಡಿಯವರು ರೈಲ್ವೆ ಸಚಿವರಾಗಿದ್ದಾಗ ಈ ಪ್ರಮುಖ ಯೋಜನೆಗೆ ಅಡಿಪಾಯ ಹಾಗೂ ಅಧಿಕೃತ ಮಂಜೂರಾತಿ ದೊರೆತಿತ್ತು. ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಅಂತಿಮ ಹಂತಕ್ಕೆ ತಲುಪಿದ್ದರೂ, ಪ್ರಮುಖವಾಗಿ ಬೇಕಿರುವ ಆರ್ಥಿಕ ಸಂಪನ್ಮೂಲದ ಕೊರತೆಯಿಂದಾಗಿ ಮುಂದಿನ ಹಂತದ ಕಾಮಗಾರಿಗಳು ನಿಧಾನಗೊಳ್ಳುವಂತಾಗಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯೋಜನೆಯ ಒಟ್ಟು ಭೂಸ್ವಾಧೀನ ಮತ್ತು ಪರಿಹಾರ ಪ್ರಕ್ರಿಯೆಗೆ ಅಂದಾಜು 400 ರಿಂದ 450 ಕೋಟಿ ರೂಪಾಯಿಗಳ ಅಗತ್ಯವಿದ್ದು, ಇಲ್ಲಿವರೆಗೆ ಕೇವಲ 50 ಕೋಟಿ ರೂಪಾಯಿ ಮಾತ್ರ ಬಿಡುಗಡೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 1700 ಎಕರೆ ಜಮೀನು ಸ್ವಾಧೀನಕ್ಕೆ ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆಗಳು ಪೂರ್ಣಗೊಂಡಿದ್ದು, ರೈತರು ಸ್ವಯಂಪ್ರೇರಿತರಾಗಿ ಭೂಮಿ ಬಿಟ್ಟುಕೊಡಲು ಸಿದ್ಧರಿದ್ದಾರೆ. ಆದರೆ, ಸರ್ಕಾರದಿಂದ ಅಗತ್ಯವಿರುವ ಹಣಕಾಸಿನ ನೆರವು ಸಿಗುತ್ತಿಲ್ಲ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ವಾರ್ಷಿಕ 50,000 ಕೋಟಿ ರೂಪಾಯಿಗಳನ್ನು ವಿನಿಯೋಗಿಸುತ್ತಿರುವ ಸರ್ಕಾರ, ಕೇವಲ 400 ರಿಂದ 500 ಕೋಟಿ ರೂಪಾಯಿಗಳ ಅಲ್ಪ ಮೊತ್ತದ ರೈಲ್ವೆ ಅನುದಾನ ಬಿಡುಗಡೆಗೆ ಮೀನಮೇಷ ಎನ್ನುತ್ತಿರುವುದು ಖಂಡನೀಯ ಎಂದು ಅವರು ದೆಹಲಿಯಲ್ಲಿ ನಡೆದ ಮುಖ್ಯಮಂತ್ರಿಗಳ ಸಭೆಯಲ್ಲೂ ಪ್ರಸ್ತಾಪಿಸಿರುವುದಾಗಿ ತಿಳಿಸಿದ್ದಾರೆ.

ಹೈನುಗಾರಿಕೆ, ಕೈಗಾರಿಕೆ ಹಾಗೂ ವ್ಯಾಪಾರ ವಹಿವಾಟಿಗೆ ಜೀವನಾಡಿಯಾಗಲಿರುವ ಈ ರೈಲ್ವೆ ಯೋಜನೆಯ ಜೊತೆಗೆ, ಬೆಳಗಾವಿ ವಿಮಾನ ನಿಲ್ದಾಣ ರಸ್ತೆ ಮತ್ತು ವಿವಿಧ ಟರ್ಮಿನಲ್ ಕಾಮಗಾರಿಗಳು ನವೆಂಬರ್-ಡಿಸೆಂಬರ್ ಒಳಗಾಗಿ ಪೂರ್ಣಗೊಂಡು ಲೋಕಾರ್ಪಣೆಯಾಗುವ ವಿಶ್ವಾಸವಿದೆ. ರೈಲ್ವೆ ನಿಲ್ದಾಣದ ಫುಟ್ ಓವರ್ ಬ್ರಿಡ್ಜ್ ಹಾಗೂ ಎಸ್ಕಲೇಟರ್ ಕಾಮಗಾರಿಗಳು ಸಹ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿವೆ. ಆದರೆ, ರಾಜ್ಯ ಸರ್ಕಾರವು ತನ್ನ ಧೋರಣೆಯನ್ನು ಬದಲಿಸಿಕೊಂಡು ಕೂಡಲೇ ಅಗತ್ಯವಿರುವ ಪೂರ್ಣ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಪ್ರಾದೇಶಿಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಶೆಟ್ಟರ್ ಆಗ್ರಹಿಸಿದ್ದಾರೆ.

Tags:

error: Content is protected !!