ಸಚಿವ ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ದಾಳಿ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ಹಾಗೂ ಪಕ್ಷವನ್ನು ರಾಜಕೀಯವಾಗಿ ಗುರಿಯಾಗಿಸಲು ಇ.ಡಿ ಅಸ್ತ್ರವನ್ನು ಬಳಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ತಮ್ಮೆಲ್ಲಾ ಸಚಿವರಿಗೆ ಎಚ್ಚರಿಕೆಯ ಮಾತುಹೇಳಿರುವ ಡಿಕೆ ಶಿವಕುಮಾರ್, ಇ.ಡಿ ಯಾರನ್ನೂ ಬಿಡುವುದಿಲ್ಲ, ಸುಳ್ಳು ಕಥೆ ಕಟ್ಟಿ, ಸುಳ್ಳು ಆರೋಪಗಳನ್ನು ಮಾಡಿ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸುಮಾರು 40 ಮಂದಿ ಕಾಂಗ್ರೆಸ್ ಶಾಸಕರು ಮತ್ತು ಸಚಿವರನ್ನು ಇ.ಡಿ ಗುರಿಯಾಗಿಸಬಹುದು. ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು ಎಂದು ಡಿಕೆ ಶಿವಕುಮಾರ್ ಸಲಹೆ ನೀಡಿದ್ದಾರೆ. ಬಿಜೆಪಿ ನಾಯಕರ ವಿರುದ್ಧದ ಹಳೆಯ ಎಫ್‌ಐಆರ್‌ಗಳು, ವಿಶೇಷವಾಗಿ ಭೋವಿ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಇ.ಡಿ ಏಕೆ ಇನ್ನೂ ತನಿಖೆ ನಡೆಸಿಲ್ಲ ಎಂದು ಅವರು ಪ್ರಶ್ನಿಸಿದರು. ಇದು ಬಿಜೆಪಿಯ ರಾಜಕೀಯ ಪ್ರೇರಿತ ತಂತ್ರ ಎಂದು ಅವರು ಪುನರುಚ್ಚರಿಸಿದರು.
ಇನ್ನು ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಮೇಲಿನ ಇಡಿ ದಾಳಿಗೆ ಸಂಬಂಧಿಸಿದಂತೆ ಭಾರತದಲ್ಲಿದ್ದು, ಬೇರೆ ದೇಶದೊಂದಿಗೆ ವ್ಯವಹಾರ ಮಾಡಬಾರದಾ? ಕಾನೂನಿನಲ್ಲಿ ಅದಕ್ಕೆ ಅಧಿಕಾರವಿದೆ. ಕೇವಲ ರಾಜಕೀಯ. ಇಂತಹ ರಾಜಕಾರಣದಿಂದ 12 ಲಕ್ಷ ಉದ್ಯೋಗಗಳು ಭಾರತವನ್ನು ಬಿಟ್ಟು ಹೋಗಿವೆ ಎಂದು ಆರೋಪಿಸಿದರು. ಸತೀಶ್ ಜಾರಕಿಹೊಳಿ ವ್ಯವಹಾರಸ್ಥರು, ದಲಿತ ನಾಯಕರು. ಅವರು ಎತ್ತರವಾಗಿ ಬೆಳೆಯುತ್ತಿರುವುದು ಸಹಿಸಲಾಗುತ್ತಿಲ್ಲ. ಇದು ಬ್ಯಾಕ್ ಫಾರ್ವರ್ಡ್ ಆಗುವ ವಿಶ್ವಾಸ ನನಗಿದೆ ಎಂದರು.
