ಗರ್ಭಿಣಿಯರು ಹಾಗೂ ಮಕ್ಕಳಿಗೆ ಸಮತೋಲನ ಮತ್ತು ಪೌಷ್ಟಿಕ ಆಹಾರ ನೀಡುವುದು ಅತ್ಯಂತ ಅಗತ್ಯವಾಗಿದ್ದು, ಗರ್ಭಾವಸ್ಥೆಯಲ್ಲಿ ತಾಯಿ ಹಾಗೂ ಗರ್ಭದಲ್ಲಿರುವ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಪೋಷಕಾಂಶಯುಕ್ತ ಆಹಾರ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್ಸಿ ಕಾಗವಾಡದ ನ್ಯಾಯಾಧೀಶೆ ಶ್ರೀಮತಿ ರೂಪ ಚೆನ್ನಿವರ್ ಹೇಳಿದರು.


ಬುಧವಾರ ಬೆಳಿಗ್ಗೆ ಮಂಗಸೂಳಿ ಗ್ರಾಮದ ತುಕಾರಾಂ ಮಂದಿರದ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಬೆಳಗಾವಿ, ತಾಲೂಕು ಕಾನೂನು ಸೇವಾ ಸಮಿತಿ ಕಾಗವಾಡ ಹಾಗೂ ಕಾಗವಾಡ ನ್ಯಾಯವಾದಿಗಳ ಸಂಘದ ಸಹಯೋಗದಲ್ಲಿ ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ತಾಲೂಕು ಪಂಚಾಯಿತಿ ಕಾಗವಾಡ ವತಿಯಿಂದ ಆಯೋಜಿಸಿದ್ದ ‘ವಿಶ್ವ ಪೌಷ್ಟಿಕಾಂಶ ದಿನ–2026’, ‘ನಮ್ಮ ಅಂಗನವಾಡಿ–ನಮ್ಮ ಜವಾಬ್ದಾರಿ’ ಹಾಗೂ ‘ಮನೆಮನೆಯಲ್ಲಿ ಪೋಷಣ ಹಬ್ಬ’ ಕಾರ್ಯಕ್ರಮದಲ್ಲಿ ನ್ಯಾಯಾಧೀಶರು ಮಾತನಾಡಿದರು.

ಗರ್ಭಿಣಿಯರು ಹಸಿರು ಸೊಪ್ಪು, ತರಕಾರಿಗಳು, ಹಣ್ಣುಗಳು, ಬೇಳೆಕಾಳುಗಳು, ಹಾಲು ಹಾಗೂ ಹಾಲಿನ ಉತ್ಪನ್ನಗಳು ಸೇರಿದಂತೆ ಪೋಷಕಾಂಶಯುಕ್ತ ಆಹಾರವನ್ನು ನಿಯಮಿತವಾಗಿ ಸೇವಿಸುವ ಮೂಲಕ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕಾಗವಾಡ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಿ.ಆರ್. ರಾವ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗರ್ಭಿಣಿಯರು ಹಾಗೂ ಮಕ್ಕಳ ಪೌಷ್ಟಿಕಾಂಶದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿವೆ. ಚೀನಾ ದೇಶದಲ್ಲಿ ಅನುಸರಿಸುತ್ತಿರುವ ಉತ್ತಮ ವ್ಯವಸ್ಥೆಗಳು ಇಲ್ಲಿಯೂ ಜಾರಿಗೆ ಬರಬೇಕು ಎಂದು ಹೇಳಿದರು. ಪೋಷಕರು ತಮ್ಮ ಮಕ್ಕಳು ಮೊಬೈಲ್ ಬಳಸುತ್ತಿರುವ ಬಗ್ಗೆ ಗಮನಹರಿಸಬೇಕು. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ಮೆದುಳಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಮಕ್ಕಳ ಮೊಬೈಲ್ ಬಳಕೆಯ ಬಗ್ಗೆ ಪೋಷಕರು ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದರು.

ಸಿಡಿಪಿಒ ಸಂಜುಕುಮಾರ್ ಸದಲಿಗೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಗರ್ಭಿಣಿಯರು ಹಾಗೂ ಮಕ್ಕಳ ಉತ್ತಮ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ವಯಸ್ಸಿಗೆ ಅನುಗುಣವಾದ ಸಮತೋಲನ ಆಹಾರ ನೀಡಬೇಕು. ಶಿಶುವಿಗೆ ಆರು ತಿಂಗಳವರೆಗೆ ತಾಯಿಯ ಹಾಲನ್ನೇ ನೀಡಬೇಕು. ಆರು ತಿಂಗಳ ನಂತರ ತಾಯಿಯ ಹಾಲಿನೊಂದಿಗೆ ಪೌಷ್ಟಿಕ ಪೂರಕ ಆಹಾರವನ್ನು ಪರಿಚಯಿಸುವುದು ಅಗತ್ಯ ಎಂದು ತಿಳಿಸಿದರು.
ಬೈಟ್
ವಿಶ್ವ ಪೌಷ್ಟಿಕಾಂಶ ದಿನದ ಅಂಗವಾಗಿ ಮಂಗಸೂಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶಿವಕುಮಾರ್ ಕುರುಬೆಟ್ ಅವರು ಪೌಷ್ಟಿಕಾಂಶಕ್ಕೆ ಸಂಬಂಧಿಸಿದಂತೆ ವಿಷಯವಾರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಶ್ರೀಮಂತ ಕಾರ್ಯಕ್ರಮ ಹಾಗೂ ಬಾಲಕರ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪತಹಶೀಲ್ದಾರ್ ಅನ್ನಾಸಾಹೇಬ್ ಕೋರೆ, ನ್ಯಾಯವಾದಿ ಈ.ಎಸ್. ವರ್ಧನ್, ಆರ್ಯ ಭಂಡಾರಿ, ವಕೀಲರ ಸಂಘದ ಉಪಾಧ್ಯಕ್ಷ ಎ.ಎಸ್. ನಾಂದ್ರೆ, ಎಎಸ್ಐ ಜೆ.ಕೆ. ಕಾಜಿ, ವಿಡಿಯೋ ಸಂಜಯ ಸೂರ್ಯವಂಶಿ, ಶಾನೂರ್ ಹುಸೇನ್ ಕೋರೆ, ಗ್ರಾಮ ಆಡಳಿತ ಅಧಿಕಾರಿ ಶ್ರೀಮತಿ ಎಂ.ಎಸ್. ಖಿಲಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯವಸ್ಥಾಪಕ್ಕೆ ಸುಜಾತಾ ಪಾಟೀಲ್, ಶೈಲಾ ಇಂಗಳೇಶ್ವರ, ಮಂಜುಳಾ ಪಿಸೆ ಅಂಗನವಾಡಿ ಸಿಬ್ಬಂದಿ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಅಮರ ಪಾಟೀಲ್ ನಿರೂಪಿಸಿದರು.
ಸುಕುಮಾರ್ ಬನ್ನುರೆ
ಇನ್ನ ನ್ಯೂಸ ಕಾಗವಾಡ
