Kagawad

ಕಡಿಮೆ ವೆಚ್ಚ, ಹೆಚ್ಚಿನ ಲಾಭ: ರೈತರಿಗೆ ತುಳಸಿ ಬೆಳೆ ಸುವರ್ಣಾವಕಾಶ!

Share

ಕಬ್ಬು ಸೇರಿದಂತೆ ಸಾಂಪ್ರದಾಯಿಕ ಬೆಳೆಗಳ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಆದಾಯ ಪಡೆಯಲು ತುಳಸಿ ಬೆಳೆಯು ರೈತರಿಗೆ ಉತ್ತಮ ಪರ್ಯಾಯ ಬೆಳೆಯಾಗಬಹುದು ಎಂದು ಕೃಷಿ ತಜ್ಞ ಹಾಗೂ ಯುವ ರೈತ ರಾಹುಲ್ ಶಿರಗುಪ್ಪೆ ಹೇಳಿದರು.

ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಯುವ ರೈತ ರಾಹುಲ್ ಶಿರಗುಪ್ಪೆ ಅವರು ತಮ್ಮ ಸ್ನೇಹಿತ ತೀರ್ಥಂಕರ್ ಚೌಗುಲೆ ಅವರೊಂದಿಗೆ ತುಳಸಿ ಬೆಳೆಯನ್ನು ಪ್ರಾಯೋಗಿಕವಾಗಿ ಬೆಳೆಯಲು ಆರಂಭಿಸಿದ್ದಾರೆ. ತುಳಸಿ ಬೆಳೆಯ ಕುರಿತು ತಮ್ಮ ಅನುಭವ ಹಂಚಿಕೊಂಡ ಅವರು, “ಪ್ರಸ್ತುತ ಕೃಷಿ ಕ್ಷೇತ್ರದಲ್ಲಿ ಹವಾಮಾನ ವೈಪರೀತ್ಯ, ರೋಗಬಾಧೆ, ಕೂಲಿ ಕಾರ್ಮಿಕರ ಕೊರತೆ ಹಾಗೂ ಮಾರುಕಟ್ಟೆ ದರಗಳ ಏರಿಳಿತದಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.

ಕಬ್ಬು ಬೆಳೆಯಲು ಹೆಚ್ಚಿನ ವೆಚ್ಚವಾಗುತ್ತಿದ್ದು, ಉತ್ಪಾದನೆಗೆ ಅನುಗುಣವಾಗಿ ನಿರೀಕ್ಷಿತ ಆದಾಯ ದೊರೆಯದಿರುವುದು ರೈತರ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿದೆ. ಕಬ್ಬು ಹೊರತುಪಡಿಸಿ ಇತರ ಬೆಳೆಗಳನ್ನು ಬೆಳೆಯಲು ಮುಂದಾದರೂ ಹವಾಮಾನ ವೈಪರೀತ್ಯ ಹಾಗೂ ರೋಗಬಾಧೆಯಿಂದಾಗಿ ಬೆಳೆ ನಷ್ಟವಾಗುವ ಸಾಧ್ಯತೆ ಇದೆ. ಮತ್ತೊಂದೆಡೆ, ಬೆಳೆ ಕಟಾವು ಮಾಡಿ ಮಾರುಕಟ್ಟೆಗೆ ತರುವ ವೇಳೆಗೆ ದರ ಕುಸಿಯುವುದರಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ. ಇದರಿಂದಾಗಿ ಅನೇಕ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ” ಎಂದು ಅವರು ಹೇಳಿದರು.

ತುಳಸಿ ನಾಟಿ ಮಾಡುವಾಗ ಕೊಟ್ಟಿಗೆ ಗೊಬ್ಬರ ಹಾಕಿ ಜಮೀನು ಹದಗೊಳಿಸಿ, 5 ಅಡಿ ಅಂತರದಲ್ಲಿ ತುಳಸಿ ಸಸಿಗಳನ್ನು ನಾಟಿ ಮಾಡಲಾಗುತ್ತದೆ. ಹನಿ ನೀರಾವರಿ ಮುಖಾಂತರ ಕಡಿಮೆ ನೀರಿನಲ್ಲಿ ಈ ಬೆಳೆ ಬೆಳೆಯಬಹುದು. ಕೀಟಬಾಧೆ ಬಹಳಷ್ಟು ವಿರಳವಾಗಿದ್ದು, ಅಲ್ಪ ವೆಚ್ಚದಲ್ಲಿ ನಾಟಿ ಮಾಡಿ ಉತ್ತಮ ಆದಾಯ ಪಡೆದುಕೊಳ್ಳಲು ಸಾಧ್ಯವಿದೆ.

ತುಳಸಿ ಬೆಳೆಯು ರೈತರಿಗೆ ಹೊಸ ಆದಾಯದ ಮಾರ್ಗವಾಗಬಹುದು. ತುಳಸಿ ಬೆಳೆಯನ್ನು ಕಡಿಮೆ ವೆಚ್ಚದಲ್ಲಿ ಬೆಳೆಯಬಹುದಾಗಿದ್ದು, ನಾಟಿ ಮಾಡಿದ ಸುಮಾರು ಎರಡು ತಿಂಗಳ ನಂತರ ತುಳಸಿ ಗಿಡಗಳ ಚಿಗುರು ಹಾಗೂ ಎಲೆಗಳನ್ನು ಯಂತ್ರದ ಮೂಲಕ ಕಟಾವು ಮಾಡಬಹುದು. ಈ ಬೆಳೆಗೆ ಔಷಧ ಹಾಗೂ ನೀರಿನ ಬಳಕೆ ಕೂಡ ಕಡಿಮೆ ಪ್ರಮಾಣದಲ್ಲಿರುತ್ತದೆ. ಜೊತೆಗೆ ಹೆಚ್ಚಿನ ಸಂಖ್ಯೆಯ ಕೂಲಿ ಕಾರ್ಮಿಕರ ಅವಶ್ಯಕತೆ ಇರುವುದಿಲ್ಲ ಎಂದು ರಾಹುಲ್ ಶಿರಗುಪ್ಪೆ ತಿಳಿಸಿದರು.

ಒಂದು ಎಕರೆ ಜಮೀನಿನಲ್ಲಿ ಒಂದು ಬಾರಿ ತುಳಸಿ ಕಟಾವು ಮಾಡಿದಾಗ ಸುಮಾರು 400 ಕೆ.ಜಿ.ವರೆಗೆ ಒಣ ತುಳಸಿ ಉತ್ಪಾದಿಸಬಹುದು. ತುಳಸಿಯನ್ನು ತಮಿಳುನಾಡಿನ ಸೇಲಂ ನಗರದಲ್ಲಿ ಔಷಧ ತಯಾರಿಕೆಗೆ ಬಳಸಲಾಗುತ್ತಿದ್ದು, ಪ್ರತಿ ಕೆ.ಜಿಗೆ ಸುಮಾರು ₹70 ದರದಲ್ಲಿ ಖರೀದಿಸಲಾಗುತ್ತದೆ. ಒಂದು ಕಟಾವಿನಿಂದ ಸುಮಾರು ₹30 ಸಾವಿರದಿಂದ ₹35 ಸಾವಿರದವರೆಗೆ ಆದಾಯ ಪಡೆಯುವ ಸಾಧ್ಯತೆ ಇದೆ.

ತುಳಸಿ ಬೆಳೆಯ ವಿಶೇಷತೆಯೆಂದರೆ ಕಡಿಮೆ ವೆಚ್ಚದಲ್ಲಿ ಬೆಳೆಯುವುದರೊಂದಿಗೆ ನಿರಂತರವಾಗಿ ಕಟಾವು ಮಾಡುವ ಮೂಲಕ ಆದಾಯ ಪಡೆಯಬಹುದಾಗಿದೆ. ಒಂದು ಎಕರೆ ಪ್ರದೇಶದಲ್ಲಿ ತುಳಸಿ ಬೆಳೆಯನ್ನು ಸಮರ್ಪಕವಾಗಿ ನಿರ್ವಹಿಸಿದರೆ ವರ್ಷಕ್ಕೆ ಸುಮಾರು ₹4 ಲಕ್ಷದವರೆಗೆ ಆದಾಯ ಗಳಿಸಬಹುದು ಎಂದು ಅವರು ಮಾಹಿತಿ ನೀಡಿದರು.

ಕೃಷಿಯಲ್ಲಿ ಹೊಸ ಪ್ರಯೋಗಗಳಿಗೆ ಮುಂದಾಗುವ ರೈತರು ತುಳಸಿ ಬೆಳೆಯ ಕುರಿತು ಮಾಹಿತಿ ಪಡೆದು, ತಮ್ಮ ಜಮೀನಿನ ಪರಿಸ್ಥಿತಿ ಹಾಗೂ ಮಾರುಕಟ್ಟೆ ಅವಕಾಶಗಳನ್ನು ಪರಿಶೀಲಿಸಿ ಈ ಬೆಳೆಯನ್ನು ಕೈಗೊಳ್ಳಬಹುದು ಎಂದು ರಾಹುಲ್ ಶಿರಗುಪ್ಪೆ ರೈತರಿಗೆ ಸಲಹೆ ನೀಡಿದರು.

ತುಳಸಿ ಬೆಳೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ *90715 57008*ಕ್ಕೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

*- ಸುಕುಮಾರ್ ಬನ್ನುರೆ, ಇನ್ ನ್ಯೂಸ್ ಕಾಗವಾಡ*

Tags:

error: Content is protected !!