Kagawad

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಅವರ ಉಪಸ್ಥಿತಿಯಲ್ಲಿ ಕಾಗವಾಡದಲ್ಲಿ ದಹಿಹಂಡಿ ಕಾರ್ಯಕ್ರಮ

Share

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಶ್ರೀಮತಿ ನಾಗಲಕ್ಷ್ಮಿ ಚೌದರಿ ಅವರು ಕಾಗವಾಡದ ಅಂಬಾಬಾಯಿ ಮಂದಿರದಲ್ಲಿ ದೇವಿಗೆ ಪೂಜೆ ಸಲ್ಲಿಸಿ, ತಲೆಯ ಮೇಲೆ ಮೊಸರಿನ ಗಡಿಗೆ ಹೊತ್ತು, ಹರ್ಷದಿಂದ ಶ್ರೀಕೃಷ್ಣನ ಭಕ್ತಿ ಮಾಡುತ್ತಾ ದಹಿಹಂಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯುವಕರಲ್ಲಿ ಅಭೂತಪೂರ್ವ ಉತ್ಸಾಹ ಮೂಡಿಸಿದರು.

ಸೋಮವಾರ ಸಂಜೆ ಕಾಗವಾಡ ನಗರ ಪಂಚಾಯಿತಿಯ ಸಭಾಭವನದ ಆವರಣದಲ್ಲಿ ಹಿಂದೂ ಹಾಗೂ ಮುಸ್ಲಿಂ ಬಾಂಧವರು ಒಂದಾಗಿ ಸೇರಿ ದಹಿಹಂಡಿ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಿದರು. ದತ್ತ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಜ್ಯೋತಿಕುಮಾರ್ ಪಾಟೀಲ್ ಅವರ ನೇತೃತ್ವದಲ್ಲಿ ಸಾವಿರಾರು ಯುವಕ-ಯುವತಿಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ದಹಿಹಂಡಿ ಸ್ಪರ್ಧೆಯಲ್ಲಿ ಶಿರೋಳ ತಾಲೂಕಿನ ಜೈ ಮಹಾರಾಷ್ಟ್ರ ಯುವಕರ ತಂಡ ಪ್ರಥಮ ಸ್ಥಾನ ಪಡೆದು ಜ್ಯೋತಿಕುಮಾರ್ ಪಾಟೀಲ್ ಅವರು ನೀಡಿದ ₹1,11,777 ಬಹುಮಾನವನ್ನು ತನ್ನದಾಗಿಸಿಕೊಂಡಿತು.

ಶ್ರೀಕೃಷ್ಣ ಜಯಂತಿಯ ಅಂಗವಾಗಿ ಆಯೋಜಿಸಿದ್ದ ದಹಿಹಂಡಿ ಕಾರ್ಯಕ್ರಮದಲ್ಲಿ ಡಾ. ನಾಗಲಕ್ಷ್ಮಿ ಚೌದರಿ ಅವರು ಭಾಗವಹಿಸಿ, ಎಲ್ಲ ಯುವಕರಿಗೆ ಶ್ರೀಕೃಷ್ಣ ಜಯಂತಿಯ ಶುಭಾಶಯಗಳನ್ನು ಕೋರಿದರು. ಬಳಿಕ ‘ಅಚ್ಯುತಂ ಕೇಶವಂ ಕೃಷ್ಣ ದಾಮೋದರಂ, ರಾಮ ನಾರಾಯಣಂ ಜಾನಕಿ ವಲ್ಲಭಂ’ ಭಜನೆ ಹಾಡುವ ಮೂಲಕ ಎಲ್ಲರಲ್ಲೂ ಭಕ್ತಿಮಯ ವಾತಾವರಣ ನಿರ್ಮಿಸಿದರು.

ಕಾಗವಾಡ ಪಟ್ಟಣದಲ್ಲಿ ಇದೇ ಪ್ರಥಮ ಬಾರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಎಲ್ಲರೊಂದಿಗೆ ಬೆರೆತು ದಹಿಹಂಡಿ ಆಚರಣೆಯಲ್ಲಿ ಭಾಗವಹಿಸಿದ್ದಕ್ಕೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು.

ದಹಿಹಂಡಿ ಕಾರ್ಯಕ್ರಮದಲ್ಲಿ ಮೂರು ತಂಡಗಳು ಸ್ಪರ್ಧಿಸಿದ್ದವು. ಶಿರೋಳದ ಜೈ ಮಹಾರಾಷ್ಟ್ರ, ಸಾಂಗಲಿ-ಕುಪವಾಡದ ಎಸ್.ಪಿ. ಬಾಯ್ಸ್ ಹಾಗೂ ಅಗಾರಾ ಜಿಲ್ಲೆಯ ಜೈ ಹನುಮಾನ್ ಯುವಕರ ತಂಡ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಶಿರೋಳ ನಗರ ಪರಿಸತ್ ಸದಸ್ಯ ನೀಲೇಶ್ ಗಾವಡೆ ಅವರ ತಂಡವಾದ ಜೈ ಮಹಾರಾಷ್ಟ್ರ ಯುವಕರ ತಂಡ ದಹಿಹಂಡಿ ಒಡೆಯುವಲ್ಲಿ ಯಶಸ್ವಿಯಾಯಿತು.

ಕಾಗವಾಡದ ಯುವ ನಾಯಕ ಬಾಬಾಸಾಹೇಬ್ ಕಲ್ಲೋಳೆ ಹಾಗೂ ಅವರ ಸ್ನೇಹಿತರ ಪಡೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ನ್ಯಾಯವಾದಿ ಕಾಕಾ ಪಾಟೀಲ್, ಕಿರಣ ಘುಂಮಟೆ, ರಾಜು ಲಾಂಡಗೆ, ಪ್ರವೀಣ್ ಪಾಟೀಲ್, ಭರತ್ ಖೂತ್, ಅರುಣ ಜೋಶಿ, ಚಿದಾನಂದ ಅವಟಿ, ವಿನಾಯಕ್ ಚೌಗುಲೆ, ಉದಯ್ ಖೂಡೆ, ಪವನ ಪಾಟೀಲ್ ಸೇರಿದಂತೆ ಅನೇಕರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಸುಕುಮಾರ್ ಬನ್ನುರೆ
ಇನ್ನ ನ್ಯೂಸ ಕಾಗವಾಡ

Tags:

error: Content is protected !!