Belagavi

ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ಇ.ಡಿ. ದಾಳಿ: ಆಪ್ತರ ಮನೆಯಲ್ಲಿಯೂ ಪರಿಶೀಲನೆ

Share

ಅಬಕಾರಿ ಇಲಾಖೆಯಲ್ಲಿನ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಬೆಳಗ್ಗೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸತೀಶ್ ಜಾರಕಿಹೊಳಿ ಅವರ ಬೆಳಗಾವಿಯ ನಿವಾಸ, ಗೋಕಾಕಿನ ನಿವಾಸ, ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸ, ಸರ್ಕಾರಿ ನಿವಾಸ ಸೇರಿದಂತೆ ಹತ್ತಕ್ಕೂ ಅಧಿಕ ಸ್ಥಳಗಳಲ್ಲಿ ದಾಳಿ ನಡೆದಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ.ಬೆಂಗಳೂರು, ಬೆಳಗಾವಿ, ಮಹಾರಾಷ್ಟ್ರ ಸೇರಿ ಒಟ್ಟು 15 ಕಡೆ ದಾಳಿ ಮಾಡಲಾಗಿದೆ. ಜೂನ್ 24ರಂದು ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇಂದು ಕೂಡ ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ್ ಅವರ ಗೋಕಾಕ ನಿವಾಸದಲ್ಲಿಯೂ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಸತೀಶ್ ಜಾರಕಿಹೊಳಿಯವರ ಸಹೋದರಿಯ ಪತಿಯಾಗಿರುವ ಮಂಜುನಾಥ್ ಅವರ ವಿರುದ್ಧ ಅಬಕಾರಿ ಇಲಾಖೆಯಲ್ಲಿ ಅಕ್ರಮ ಹಾಗೂ ಆ ಹಣದ ವರ್ಗಾವಣೆಯ ಆರೋಪದಡಿ ಬೆಳಗಾವಿಯ ಹನುಮಾನ್ ನಗರದ ನಿವಾಸ, ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲ್ಯಾಟ್, ಮೈಸೂರು, ಹರಪನಹಳ್ಳಿ ಸೇರಿದಂತೆ ಒಟ್ಟು 6 ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು.


ಸತೀಶ್ ಜಾರಕಿಹೊಳಿ ಅವರ ನಿವಾಸಗಳ ಮೇಲಷ್ಟೇ ಅಲ್ಲದೆ, ಅವರ ಮೂವರು ಆಪ್ತರ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗಾವಿ ನಗರದ ಲಕ್ಷ್ಮೀ ಟೇಕ್ ಪ್ರದೇಶದಲ್ಲಿರುವ ಸಚಿವರ ಆಪ್ತ ಹಾಗೂ ವೈದ್ಯ ಡಾ. ಗಿರೀಶ್ ಸೋನವಾಲ್ಕರ್ ಮತ್ತು ರಾಜು ಧರಗಶೆಟ್ಟಿ, ವಿಠ್ಠಲ ಪರಸನ್ನವರ ಅವರ ನಿವಾಸದ ಮೇಲೂ ದಾಳಿ ನಡೆದಿದೆ ಎನ್ನಲಾಗಿದೆ.

Tags:

error: Content is protected !!