Chikkodi

ಮುಂದಿನ ಶಿಕ್ಷಕರ ದಿನಾಚರಣೆಯೊಳಗೆ ಚಿಕ್ಕೋಡಿಯಲ್ಲಿ ‘ಗುರು ಭವನ’ ನಿರ್ಮಾಣ: ಪ್ರಕಾಶ ಹುಕ್ಕೇರಿ

Share

ಕಳೆದ 40 ವರ್ಷಗಳಲ್ಲಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದೇನೆ.ಜಾಗದ ಸಮಸ್ಯೆಯಿಂದ ಗುರು ಭವನ ನಿರ್ಮಾಣ ಮಾತ್ರ ಬಾಕಿ ಉಳಿದಿದೆ.ಉಪವಿಭಾಗಧಿಕಾರಿ,ತಹಶೀಲ್ದಾರರು ಸೂಕ್ತ ಜಾಗ ಒದಗಿಸಿದರೆ, ಮುಂದಿನ ಶಿಕ್ಷಕರ ದಿನಾಚರಣೆಯೊಳಗೆ ಶಾಸಕರ ನಿಧಿಯಿಂದ ಚಿಕ್ಕೋಡಿಯಲ್ಲಿ ಸುಸಜ್ಜಿತ ಗುರು ಭವನ ನಿರ್ಮಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ನವದೆಹಲಿಯ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹೇಳಿದರು.

ಚಿಕ್ಕೋಡಿ ನಗರದ ಶ್ರೀ ಪರಟಿ ನಾಗಲಿಂಗೇಶ್ವರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.2008ರಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಬಿಮ್ಸ್ ವೈದ್ಯಕೀಯ ಕಾಲೇಜು, ಚಿಕ್ಕೋಡಿಯಲ್ಲಿ ಐಟಿಐ ಹಾಗೂ ಸದಲಗಾದಲ್ಲಿ ಡಿಪ್ಲೊಮಾ ಕಾಲೇಜುಗಳನ್ನು ಮಾಡಿದೇನೆ. ಉತ್ತಮ ಕೆಲಸ ಮಾಡಿದಾಗ ಮಾತ್ರ ಜನರು ನೆನಪಿಟ್ಟುಕೊಳ್ಳುತ್ತಾರೆ ಎಂದು ಹೇಳಿದರು.

ಗುರು ಭವನ ನಿರ್ಮಾಣಕ್ಕಾಗಿ ಶಾಸಕರ ನಿಧಿಯ 50 ಕೋಟಿ ರೂ.ಗಳ ಪೈಕಿ 1 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಅದು ತಾಂತ್ರಿಕ ಕಾರಣಗಳಿಂದ ತಿರಸ್ಕೃತಗೊಂಡಿತು. ಈ ಬಾರಿ ಯಾವುದೇ ಪರಿಸ್ಥಿತಿಯಲ್ಲೂ ಜಾಗ ಪಡೆದು ಗುರು ಭವನ ನಿರ್ಮಿಸುವುದಾಗಿ ಭರವಸೆ ನೀಡಿದರು. ಇತ್ತೀಚೆಗೆ ಬಾಗಲಕೋಟೆಯಲ್ಲಿ ಶಾಲಾ ಮೇಲ್ಛಾವಣಿ ಬಿದ್ದು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆಯನ್ನು ಪ್ರಸ್ತಾಪಿಸಿದ ಅವರು, ಅಪಾಯಕಾರಿ ಶಾಲಾ ಕೊಠಡಿಗಳ ಬಗ್ಗೆ ಶಿಕ್ಷಕರು ತಕ್ಷಣ ಮಾಹಿತಿ ನೀಡಬೇಕು, ಅವುಗಳ ಬದಲಿಗೆ ಹೊಸ ಕೊಠಡಿಗಳನ್ನು ಮಂಜೂರು ಮಾಡಲಾಗುವುದು ಎಂದರು. ಯಡೂರಿನಲ್ಲಿ ಪ್ರತಿವರ್ಷ ಪ್ರವಾಹದ ನೀರು ಶಾಲೆಗೆ ನುಗ್ಗುತ್ತಿದ್ದ ಹಿನ್ನೆಲೆಯಲ್ಲಿ ಬೇರೊಂದು ಸುರಕ್ಷಿತ ಸ್ಥಳದಲ್ಲಿ 6 ಹೊಸ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಗಣೇಶ ಹುಕ್ಕೇರಿ, ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕ್ಷೇತ್ರಕ್ಕೆ 12 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಶಿಕ್ಷಕರ ಆಶೀರ್ವಾದ ಹಾಗೂ ಮಾರ್ಗದರ್ಶನದಿಂದಲೇ ನಾನು ಇಂದಿನ ಹುದ್ದೆಗೆ ಬಂದಿದ್ದೇನೆ. ಹೀಗಾಗಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಎಂದಿಗೂ ತಪ್ಪಿಸುವುದಿಲ್ಲ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಹಾಗೂ ತರಬೇತಿಗೆ ಒತ್ತು ನೀಡಿ, ಪ್ರಗತಿಪರ ಭಾರತ ನಿರ್ಮಿಸೋಣ” ಎಂದರು.

ಗಡಿ ಭಾಗದ ಗ್ರಾಮೀಣ ವಿದ್ಯಾರ್ಥಿಗಳು 10 ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಆದರೆ ಇಂದು ಶಿಕ್ಷಣ ವಾಣಿಜ್ಯೀಕರಣಗೊಳ್ಳುತ್ತಿದ್ದು, ಪೋಷಕರಿಗೆ ಆರ್ಥಿಕ ಹೊರೆಯಾಗುತ್ತಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣದ ಜತೆಗೆ ಇಂದಿನ ಗೂಗಲ್ ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ತರಬೇತಿ ನೀಡಬೇಕು ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಕರೆ ನೀಡಿದರು.

ಚಿಕ್ಕೋಡಿಯ ಶ್ರೀ ಸಂಪಾದನಾ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಕಾರ್ಯಕ್ರಮದ ಆರಂಭದಲ್ಲಿ ದೀಪ ಬೆಳಗಿಸಿ, ಭಾವಚಿತ್ರ ಪೂಜೆ ನೆರವೇರಿಸುವುದರ ಜೊತೆಗೆ, ರಾಕೆಟ್ ಮಾದರಿಯನ್ನು ಹಾರಿಸುವ ಮೂಲಕ ವಿನೂತನವಾಗಿ ಚಾಲನೆ ನೀಡಲಾಯಿತು.ಶೈಕ್ಷಣಿಕ ಜಿಲ್ಲೆಯ 24 ಅತ್ಯುತ್ತಮ ಶಿಕ್ಷಕರಿಗೆ ಜಿಲ್ಲಾಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ನಿವೃತ್ತ ಶಿಕ್ಷಕರನ್ನೂ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಸುಭಾಷ್ ಸಂಪಗಾವಿ, ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ್, ತಹಶೀಲ್ದಾರ್ ರಾಜೇಶ್ ಬುರ್ಲಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಎ. ಕುಂಬಾರ, ಬಿಇಒ ಪ್ರಭಾವತಿ ಪಾಟೀಲ, ಶಿಕ್ಷಣ ಸಂಘದ ಜಿಲ್ಲಾಧ್ಯಕ್ಷ ಹಿರೇಮಠ, ಮಾಜಿ ನಗರಸಭೆ ಸದಸ್ಯ ಗುಲಾಬ್‌ಹುಸೇನ್ ಬಾಗವಾನ್, ರವಿ ಹಂಪಣ್ಣವರ, ಪಂಚ ಗ್ಯಾರಂಟಿ ಅನುಷ್ಠಾನ ತಾಲೂಕು ಸಮಿತಿ ಅಧ್ಯಕ್ಷ ರಮೇಶ್ ಪಾಟೀಲ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ ಮಜಲಟ್ಟಿ, ಅಕ್ಷರ ದಾಸೋಹ ಉಪನಿರ್ದೇಶಕ ಮಹಾದೇವ ಜನಗೌಡ ಸೇರಿದಂತೆ ಹಲವು ಗಣ್ಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಡಿಡಿಪಿಐ ಅಜಿತ್ ಮನ್ನಿಕೇರಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಬಿಇಒ ಪ್ರಭಾವತಿ ಪಾಟೀಲ ವಂದಿಸಿದರು.

Tags:

error: Content is protected !!