Vijaypura

ಸಮಾಧಿಯಲ್ಲಿದ್ದ ದೇಹ 8 ತಿಂಗಳಾದರೂ ನಿಷ್ಕಳಂಕ; ಮನಗೂಳಿಯಲ್ಲಿ ಶ್ರೀ ಮಲ್ಲಯ್ಯ ಸರೂರ ಮುತ್ಯಾರ ಪವಾಡ; ದೈವಿ ವಾಣಿಯಂತೆ ಎಂಟು ತಿಂಗಳ ಬಳಿಕ ಶವ ಹೊರ ತಗೆದು ಬೇರೆಡೆ ಅಂತ್ಯ ಸಂಸ್ಕಾರ ನೆರವೇರಿಸಿದ ಭಕ್ತರು…

Share

ಈ ಪಟ್ಟಣದಲ್ಲಿ ಅದ್ಭುತ ಹಾಗೂ ಅಪರೂಪದ ಪವಾಡವೊಂದು ಜರುಗಿದೆ. ಹಾಲುಮತ ಗುರುಪೀಠದ ಗುರು, ಪವಾಡ ಪುರುಷ ಶ್ರೀ ಮಲ್ಲಯ್ಯ ಸರೂರ ಮುತ್ಯಾರ ಅಂತ್ಯಕ್ರಿಯೆ ನಡೆದು ಎಂಟು ತಿಂಗಳು ಕಳೆದರೂ, ಅವರ ದೇಹಕ್ಕೆ ಯಾವುದೇ ಹಾನಿಯಾಗದೆ ಹಾಗೇ ಇರುವುದು ಭಕ್ತರಲ್ಲಿ ಅಚ್ಚರಿ ಮೂಡಿಸಿದೆ. ದೈವಿ ವಾಣಿಯಂತೆ ಇಂದು ಸಮಾಧಿಯಿಂದ ದೇಹವನ್ನು ಹೊರತೆಗೆದು, ವಿಜೃಂಭಣೆಯಿಂದ ಮರು ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಪವಾಡ ಪುರುಷರ ಅಂತ್ಯಕ್ರಿಯೆ ಎರಡೆರಡು ಬಾರಿ ಮಾಡಲು ಕಾರಣವಾದರು ಏನು…? ಅವರು ಮಾಡುತ್ತಿದ್ದ ಪವಾಡಗಳೇನು ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್…

ಹೌದು ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದಲ್ಲಿ ಪವಾಡ ಒಂದು ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಪವಾಡ ಪುರುಷ ಶ್ರೀ ಮಲ್ಲಯ್ಯ ಸರೂರ ಮುತ್ಯಾ ಅವರು 2025 ಡಿಸೆಂಬರ್ 31 ರಂದು ಲಿಂಗೈಕ್ಯರಾಗಿದ್ದರು. 2026 ರ ಜನವರಿ 1 ರಂದು ಪಟ್ಟಣದ ಹೊರ ಭಾಗದ ಚೌಕಿಮಠದ ಬಳಿ ಶಾಸ್ತ್ರೋಕ್ತವಾಗಿ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಆದರೆ, ಅಂತ್ಯಕ್ರಿಯೆ ಮುಗಿದು 8 ತಿಂಗಳು 2 ದಿನಗಳ ಬಳಿಕ ಸಮಾಧಿಯಲ್ಲಿದ್ದ ಪವಾಡ ಪುರುಷರ ದೇಹವನ್ನು ಮತ್ತೊಮ್ಮೆ ಹೊರತೆಗೆದು ಅಂತ್ಯಕ್ರಿಯೆ ಮಾಡಲು ಭಕ್ತರು ಮುಂದಾದರು ಇಂದು ಅವರ ಶವ ಹೊರ ತಗೆಯುತ್ತಿದ್ದಂತೆ ಭಕ್ತರು ಕಂಗಾಲಾಗಿದ್ದಾರೆ. ಏಕೆಂದರೆ, ಇಷ್ಟೊಂದು ತಿಂಗಳುಗಳೇ ಕಳೆದರೂ ಮುತ್ಯಾರ ದೇಹಕ್ಕೆ ಯಾವುದೇ ಹಾನಿಯಾಗಿರಲಿಲ್ಲ…

ಸಮಾಧಿಯಲ್ಲಿದ್ದ ದೇಹವನ್ನು ಹೊರತೆಗೆಯಲು ಕಾರಣವಾಗಿದ್ದು ಒಂದು ದೈವವಾಣಿ. ಇತ್ತೀಚೆಗೆ ಲಾಯವ್ವ ಎಂಬ ಭಕ್ತೆಯ ಮೈಮೇಲೆ ಬಂದಿದ್ದ ಮಲ್ಲಯ್ಯ ಸರೂರ ಮುತ್ಯಾ, ಸಮಾಧಿಯಲ್ಲಿ ನನ್ನ ದೇಹ ಹಾಗೆಯೇ ಇದೆ. ಅದನ್ನು ಹೊರ ತೆಗೆದು ಶ್ರಾವಣ ಮಾಸದಲ್ಲಿ ಬೀರಲಿಂಗೇಶ್ವರ ದೇಗುಲದ ಗದ್ದುಗೆ ಪಕ್ಕದಲ್ಲಿ ಮರು ಅಂತ್ಯಕ್ರಿಯೆ ಮಾಡಿ. ಹೀಗೆ ಮಾಡಿದರೆ ನಾಡಿಗೆ ಬಂದಿರುವ ಬರಗಾಲ ನೀಗಿ, ಮಳೆ-ಬೆಳೆಯಾಗಿ ಎಲ್ಲರಿಗೂ ಒಳಿತಾಗಲಿದೆ ಎಂದಿದ್ದರಂತೆ. ಹೀಗಾಗಿ ಭಕ್ತರು
ದೈವ ವಾಣಿಯಂತೆಯೇ ಇಂದು ನಸುಕಿನ ಜಾವ ಭಕ್ತರು ಸಮಾಧಿಯಿಂದ ದೇಹವನ್ನು ಹೊರತೆಗೆದು ಪಟ್ಟಣದಲ್ಲಿ ಬೃಹತ್ ಮೆರವಣಿಗೆ ಮಾಡಿ ದೈವಿ ವಾಣಿಯಂತೆ ಅಂತ್ಯ ಸಂಸ್ಕಾರ ನೆರವೇರಿಸಿದರು…

ಮನಗೂಳಿ ಪಟ್ಟಣದಲ್ಲಿ ಡೊಳ್ಳು ಕುಣಿತ, ಸುಮಂಗಲಿಯರ ಕುಂಭ ಮೇಳದೊಂದಿಗೆ ಜಾತ್ರೆಯ ವಾತಾವರಣದಲ್ಲಿ ಶ್ರೀಗಳ ದೇಹದ ವಿಜೃಂಭಣೆಯ ಮೆರವಣಿಗೆ ನಡೆಸಿ ಅವರ ಇಚ್ಚೆಯಂತೆ. ಅಂತ್ಯಕ್ರಿಯೆ ನೆರವೇರಿಸಿದರು. ಈ ಹಿಂದೆ ಬರಗಾಲ ಬಿದ್ದಾಗ ಮುಳ್ಳಿನ ಕಂಟೆಯ ಮೇಲೆ ನಿಂತು ಮಳೆ ತರಿಸುವ ಪವಾಡ ಮಾಡಿದ್ದ ಮುತ್ಯಾರು ಮರು ಅಂತ್ಯಕ್ರಿಯೆಯಿಂದ ಈಗ ಮತ್ತೆ ನಾಡಿನಲ್ಲಿ ಸುಭಿಕ್ಷೆ ನೆಲೆಸಲಿದೆ ಎಂಬ ಭರವಸೆ ಭಕ್ತರದ್ದಾಗಿದೆ. ಇದು ಎಷ್ಟರ ಮಟ್ಟಿಗೆ ಇಡೇರುತ್ತೆ‌ ಎಂಬುದು‌ ಕಾದು ನೋಡಬೇಕಿದೆ.

ವಿಜಯಕುಮಾರ ಸಾರವಾಡ,
ಇನ್ ನ್ಯೂಜ್,
ವಿಜಯಪುರ.

Tags:

error: Content is protected !!