ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಮುರ್ದ್ನಲ್ಲಿರುವ ಪ್ರತಿಷ್ಠಿತ ಉಗಾರ ಶುಗರ್ ಕಾರ್ಖಾನೆಗೆ ದಿಢೀರ್ ಬೀಗಮುದ್ರೆ ನೋಟಿಸ್ ನೀಡಿರುವುದನ್ನು ಖಂಡಿಸಿ ಉಗಾರ ಶುಗರ್ ವರ್ಕರ್ಸ್ ಯೂನಿಯನ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.


ಕಾಗವಾಡ ತಾಲೂಕಿನ ಉಗಾರ ಮುರ್ದ್ನಲ್ಲಿರುವ ಪ್ರತಿಷ್ಠಿತ ಉಗಾರ ಶುಗರ್ ಕಾರ್ಖಾನೆಗೆ ದಿಢೀರ್ ಬೀಗಮುದ್ರೆ ನೋಟಿಸ್ ನೀಡಿರುವುದನ್ನು ಖಂಡಿಸಿ ಉಗಾರ ಶುಗರ್ ವರ್ಕರ್ಸ್ ಯೂನಿಯನ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಸುಮಾರು 85 ವರ್ಷಗಳ ಇತಿಹಾಸವಿರುವ ಈ ಕಾರ್ಖಾನೆಯನ್ನು ನಂಬಿ ಬದುಕುತ್ತಿರುವ ಸಾವಿರಾರು ಕಾರ್ಮಿಕರು ಹಾಗೂ ರೈತರ ಕುಟುಂಬಗಳು ಅತಂತ್ರಗೊಂಡಿದ್ದು, ಆದೇಶವನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿವೆ.
ಉಗಾರ ಶುಗರ್ ಕಾರ್ಖಾನೆಗೆ ನೀಡಲಾಗಿರುವ ಕ್ಲೋಸರ್ ನೋಟಿಸ್ನಿಂದಾಗಿ ಸುಮಾರು 4500ಕ್ಕೂ ಅಧಿಕ ಕಾರ್ಮಿಕರು ಮತ್ತು ಅವರ ಕುಟುಂಬಗಳ ಅಸ್ತಿತ್ವಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಯಾವುದೇ ಮುನ್ಸೂಚನೆ ಅಥವಾ ಸಮರ್ಪಕ ಪರಿಶೀಲನೆ ನಡೆಸದೆ ಏಕಾಏಕಿ ಈ ರೀತಿಯ ಕಠಿಣ ಕ್ರಮ ಕೈಗೊಂಡಿರುವುದು ಖಂಡನೀಯ ಎಂದು ಕಾರ್ಮಿಕ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಸರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಿರುವ ಕಾರ್ಖಾನೆಯ ಮೇಲಿನ ಈ ಕ್ರಮದಿಂದ ಕಾರ್ಮಿಕ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.ಕಾರ್ಖಾನೆಯ ಸುತ್ತಮುತ್ತ ಯಾವುದೇ ರೀತಿಯ ವಾಸನೆ ಅಥವಾ ಸಮಸ್ಯೆಗಳಿಲ್ಲದಿದ್ದರೂ, ಅನಗತ್ಯ ದೂರುಗಳ ಆಧಾರದ ಮೇಲೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸ್ಥಳೀಯ ಮಹಿಳಾ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ. ಒಂದು ವೇಳೆ ಈ ಆದೇಶವನ್ನು ಕೂಡಲೇ ಹಿಂಪಡೆಯದಿದ್ದರೆ, ಉಗಾರ್ ಬಂದ್ ಮಾಡಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಂಘಟನೆಯ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಕೆ.ಎಂ. ಕರಿಗಾರ, ಎಸ್. ಎಂ. ಕಾಂಬಳೆ, ಎ.ಎಚ್.ನಾವಲಿಗೇರ, ಎನ್.ಟೋಪಿವಾಲಿ, ಎಸ್.ನ್ ಪೂಜಾರಿ, ಎ.ಎ.ಕಾಮತ್, ಎಂ.ಜಿ. ಉಳ್ಳಾಗಡ್ಡಿ, ಎ.ಬಿ. ವಾಲಿ. ಪಿ.ವ್ಹಿ ಜೋಶಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
